ಒಪ್ಪಂದ ಆಗಿದೆ ಎಂದು ಡಿಸಿಎಂ ಹೇಳ್ತಾರೆ, ನನಗೂ ಅವರಿಗೂ ಒಪ್ಪಂದ ಆಗಿಲ್ಲವೆಂದು ಸಿಎಂ ಹೇಳ್ತಾರೆ. ಹಾಗಾದರೆ ಇದ್ದ ಇಬ್ಬರಲ್ಲಿ ಕದ್ದವರ್ಯಾರು ಎಂಬಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರ ರಾಜ್ಯದ ಜನರ ಮಧ್ಯೆ ಗೊಂದಲಗಳನ್ನು ಮೂಡಿಸಿದೆ. ರಾಜ್ಯ ಸರ್ಕಾರ ಅಸಹ್ಯವಾಗಿ ವರ್ತಿಸುತ್ತಿದೆ. ಸಿಎಂ, ಡಿಸಿಎಂ ಅವರ ಅಧಿಕಾರದ ದಾಹದ ಹೇಳಿಕೆಗಳು ಗೊಂದಲವಾಗಿವೆ. ಒಪ್ಪಂದ ಆಗಿದೆ ಎಂದು ಡಿಸಿಎಂ ಹೇಳ್ತಾರೆ, ನನಗೂ ಅವರಿಗೂ ಒಪ್ಪಂದ ಆಗಿಲ್ಲವೆಂದು ಸಿಎಂ ಹೇಳ್ತಾರೆ. ಹಾಗಾದರೆ ಇದ್ದ ಇಬ್ಬರಲ್ಲಿ ಕದ್ದವರ್ಯಾರು ಎಂಬಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬರ ಸಮಾಜದ ಸ್ವಾಮೀಜಿಗಳು ಸಿದ್ದರಾಮಯ್ಯ ಪರ ಹೇಳ್ತಾರೆ. ಒಕ್ಕಲಿಗ ಸ್ವಾಮೀಜಿಗಳು ಡಿಕೆಶಿ ಪರ ಹೇಳ್ತಾರೆ. ದಲಿತ ಸಮಾಜದ ಸ್ವಾಮೀಜಿಗಳು ದಲಿತರ ಪರ ಹೇಳ್ತಾರೆ. ಇದೆಲ್ಲದರ ಮಧ್ಯೆ ಶಾಸಕರ ಬೇರೆ ಬೇರೆ ಗುಂಪುಗಳಾಗಿದ್ದು, ಇವರ ಕಚ್ಚಾಟದಲ್ಲಿ ಸರ್ಕಾರಿ ಅಧಿಕಾರಿಗಳು ಮಾತ್ರ ಯಾವುದೇ ಕೆಲಸ ಮಾಡದೆ ಆರಾಮವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿನ ಕಚ್ಚಾಟಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನನಗೇನು ಕೇಳಬೇಡಿ, ಹೈಕಮಾಂಡ್ ಕೇಳಿ ಎನ್ನುತ್ತಾರೆ. ಹಾಗಾದರೆ ಹೈಕಮಾಂಡ್‌ನಲ್ಲಿ ಖರ್ಗೆ ಇಲ್ಲವಾ?, ಕಾಂಗ್ರೆಸ್ ಪಕ್ಷವನ್ನು ಗಾಂಧಿಗಳಿಗೆ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಿಗೆ ನಾವು ಹಿಂದೂ ಮೂಲಕ ಉಳಿಯುತ್ತೇವೆ ಎಂಬ ನಂಬಿಕೆ ಬಂದಿದ್ದು, ಅವರು ಈಗ ಹಿಂದೂ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಆದರೆ ಅವರನ್ನು ಜನರು ನಂಬುವುದಿಲ್ಲ. ಕಾಂಗ್ರೆಸ್ ಈಗಾಗಲೇ ಧೂಳೀಪಟವಾಗಿದ್ದು, ರಾಜ್ಯದಲ್ಲಿ ಇನ್ನುಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಭವಿಷ್ಯ ನುಡಿದರು.ರಾಜ್ಯ ಸರ್ಕಾರ ತಂದಿರುವ ದ್ವೇಷ ಭಾಷಣ ಮಸೂದೆ ಹಿಂದೂಗಳನ್ನು ಹತ್ತಿಕ್ಕುವ ಕರಾಳ ಶಾಸನವಾಗಿದೆ. ಇದು ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದಂತಾಗಿದೆ. ಭಾರತ ಮಾತಾಕಿ ಜೈ ಎಂದರೆ ಅದು ಪ್ರಚೋದನಾಕಾರಿಯೇ?. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ರಕ್ಷಣೆ ಮಾಡುತ್ತಾರೆ. ದ್ವೇಷ ಭಾಷಣ ಎಂಬ ಹೆಸರಿನಲ್ಲಿ ತಮಗೆ ಬೇಕುಬೇಕಾದವರನ್ನು ಬಂಧಿಸಲು ಕಾಯಿದೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆಯಾಗಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಇದನ್ನು ಒಪ್ಪುವುದಿಲ್ಲ. ಇದು ಹಿಂದೂತ್ವವನ್ನು, ಹಿಂದೂ ನಾಯಕರನ್ನು ಬಂಧಿಸಿ ಆಡಳಿತ ಮಾಡುವ ಪ್ಲಾನ್ ಆಗಿದೆ. ಮುಂದಿನ ಚುನಾವಣೆಯಲ್ಲಿ ಹಿಂದೂ ಪರವಾದ ಸರ್ಕಾರ ಬರಲಿದೆ. ರಾಜ್ಯಪಾಲರು ದ್ವೇಷ ಭಾಷಣದ ಮಸೂದೆಗೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದರು. ಹಿಂದುತ್ವವನ್ನು ನೇರವಾಗಿ ಟೀಕೆ ಮಾಡುವುದು, ಹಿಂದುತ್ವ ದಮನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದರು.
