ಶಾಸಕ ಭರತ್‌ ರೆಡ್ಡಿ ಬಳ್ಳಾರಿಯ ಪರಿಸ್ಥಿತಿ ಶಾಂತ ಮಾಡುವ ಪ್ರಯತ್ನ ಮಾಡಿದ್ದು, ಕಾಂಗ್ರೆಸ್‌ ಪಕ್ಷ ಅವರ ಬೆನ್ನಿಗಿರಲಿದೆ. ಮತ್ತೊಮ್ಮೆ ‘ಬಳ್ಳಾರಿ ರಿಪಬ್ಲಿಕ್‌’ ಆಗಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರು : ಶಾಸಕ ಭರತ್‌ ರೆಡ್ಡಿ ಬಳ್ಳಾರಿಯ ಪರಿಸ್ಥಿತಿ ಶಾಂತ ಮಾಡುವ ಪ್ರಯತ್ನ ಮಾಡಿದ್ದು, ಕಾಂಗ್ರೆಸ್‌ ಪಕ್ಷ ಅವರ ಬೆನ್ನಿಗಿರಲಿದೆ. ಮತ್ತೊಮ್ಮೆ ‘ಬಳ್ಳಾರಿ ರಿಪಬ್ಲಿಕ್‌’ ಆಗಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಾರ್ದನ ರೆಡ್ಡಿ ಬಳ್ಳಾರಿ ಕಾಲಿಡುವವರೆಗೂ ಒಂದೇ ಒಂದು ಗಲಾಟೆ ಇರಲಿಲ್ಲ. ಸಣ್ಣ ಅಹಿತಕರ ಘಟನೆ, ಎಫ್‌ಐಆರ್‌ಗಳೂ ಇರಲಿಲ್ಲ. ಅವರು ಬಂದ ಮೇಲೆ ಗಲಭೆಯಾಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.

ಪೋಸ್ಟ್‌ ಹಾಕಿದ್ರೆ ತಪ್ಪೇನಿದೆ?:

ಬಳ್ಳಾರಿಯಲ್ಲಿ ಸರ್ಕಾರ ವಾಲ್ಮೀಕಿ ಮಹರ್ಷಿ ಅವರ ಪುತ್ಥಳಿ ನಿರ್ಮಿಸಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡು, ನಗರದಲ್ಲಿ ಪೋಸ್ಟರ್‌ಗಳನ್ನು ಹಾಕಿರುವುದರಲ್ಲಿ ತಪ್ಪೇನಿದೆ? ನಮ್ಮ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್‌ ಹಾಕುತ್ತಿರುತ್ತಾರೆ. ಅದನ್ನು ಬೇಡ ಎನ್ನಲಾಗುತ್ತದೆಯೇ? ಜನಾರ್ದನ ರೆಡ್ಡಿ ಮನೆ ಮುಂದೆ ಸರ್ಕಾರಿ ಜಾಗದಲ್ಲಿ ಪೋಸ್ಟರ್‌ ಹಾಕಿದರೆ ಬಿಜೆಪಿಯವರಿಗೆ ತೊಂದರೆಯೇನು? ಅದಕ್ಕೆ ಜನಾರ್ದನ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿರಲಿಲ್ಲ. ನಮ್ಮ ಕಾರ್ಯಕರ್ತನನ್ನು ಕಳೆದುಕೊಳ್ಳಲು ಬಿಜೆಪಿಯವರೇ ಕಾರಣ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುತ್ತಾರೆ. ಪೊಲೀಸರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.

ಕೈ ನಿಯೋಗ ಬಳ್ಳಾರಿಗೆ ಹೋಗುತ್ತೆ:

ಕಾಂಗ್ರೆಸ್‌ ಪಕ್ಷದಿಂದ ಈ ಘಟನೆ ಕುರಿತು ಅಧ್ಯಯನ ನಡೆಸಲು ಎಚ್‌.ಎಂ.ರೇವಣ್ಣ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಬಳ್ಳಾರಿಗೆ ಹೋಗಿದೆ. ಬಿಜೆಪಿ ಅವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲಾಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ತಬ್ಬಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕ ಭರತ್‌ ರೆಡ್ಡಿ ಅವರ ಬೆಂಕಿ ಹಚ್ಚುವ ಮಾತು ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರೂ ಯಾರ ಮನೆಗೂ ಬೆಂಕಿ ಹಚ್ಚುವುದಿಲ್ಲ. ಅದನ್ನು ಒಪ್ಪುವುದೂ ಇಲ್ಲ. ಭರತ್‌ ರೆಡ್ಡಿ ಏನು ಹೇಳಿಕೆ ನೀಡಿದ್ದಾರೆ ಎಂದು ಪರಿಶೀಲಿಸುತ್ತೇನೆ. ಜನಾರ್ದನ ರೆಡ್ಡಿ ಮನೆ ಮುಂದೆ ಪೋಸ್ಟರ್‌ ಅಂಟಿಸುವಾಗ ಭರತ್‌ ರೆಡ್ಡಿ ಸ್ಥಳದಲ್ಲಿದ್ದರಾ? ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಪೋಸ್ಟರ್‌ ಇರಬಾರದಾ ಎಂದು ಪ್ರಶ್ನಿಸಿದರು.

ಎಸ್ಟಿ ಅಮಾನತಿಗೆ ಸಮರ್ಥನೆ

ಗಲಾಟೆಗೆ ಸಂಬಂಧಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್ಪಿ) ಸೇರಿ ಅಧಿಕಾರಿಗಳ ಅಮಾನತಿನ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಘಟನೆ ಕುರಿತು ಮಾಹಿತಿ ತಿಳಿದ ಕೂಡಲೇ ಎಸ್ಪಿ ಜತೆಗೆ ಮಾತನಾಡಿದ್ದೇವೆ. ಆಗ ಎಸ್ಪಿ ಯಾವ ಪರಿಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನಗೆ ತಿಳಿದಿದೆ. ಅವರು ಏನು ಉತ್ತರ ನೀಡಿದ್ದಾರೆ ಎಂಬುದೂ ಗೊತ್ತಿದೆ. ಈ ಹಿಂದೆ ಇದ್ದ ಎಸ್ಪಿ, ಐಜಿ ಮತ್ತು ಶಾಸಕರ ಜತೆಗೂ ಚರ್ಚೆ ಮಾಡಿದೆ. ಖುದ್ದು ಶ್ರೀರಾಮುಲು ನನಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ತಕ್ಷಣ ಪೊಲೀಸರನ್ನು ಎಚ್ಚರಿಸಿದ್ದೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ಶಾಂತಿ ನೆಲೆಸುವುದು ಮುಖ್ಯ ಎಂದರು.

ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್‌:

ತಮ್ಮ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್‌. ಅವರು ಸಿನಿಮಾ ನಿರ್ಮಾಪಕರಲ್ಲವೇ, ಅದಕ್ಕಾಗಿ ಡ್ರಾಮಾ ಮಾಡುತ್ತಾರೆ. ಕೋಟೆಯಂತೆ ಮನೆ ನಿರ್ಮಿಸಿ ನೂರಾರು ಭದ್ರತಾ ಸಿಬ್ಬಂದಿ ಹೊಂದಿದ್ದಾರೆ. ಅವರನ್ನು ಯಾರು ಹತ್ಯೆ ಮಾಡುತ್ತಾರೆ ಎಂದರು.