ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್‌ ಕಟ್ಟುವೆ: ಎಂ.ವಿ. ಅಂಜಿನಪ್ಪ

| Published : Feb 24 2024, 02:34 AM IST

ಹಿರಿಯರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್‌ ಕಟ್ಟುವೆ: ಎಂ.ವಿ. ಅಂಜಿನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಬ್ಲಾಕ್‌ಗೆ ಎಂ.ವಿ. ಅಂಜಿನಪ್ಪ ಹಾಗೂ ಚಿಗಟೇರಿ ಬ್ಲಾಕ್‌ಗೆ ಮೈದೂರು ಕುಬೇರಪ್ಪ ಅವರು ಸಾರಥ್ಯ ವಹಿಸಿಕೊಂಡಿದ್ದಾರೆ. ಇಂದು(ಶನಿವಾರ) ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಪದಗ್ರಹಣ ಮಾಡುತ್ತಿದ್ದಾರೆ.

ಸಂದರ್ಶನ: ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ ವಿಧಾನಾಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಎರಡು ಬಾರಿ ಬಿಜೆಪಿ, ಎರಡು ಬಾರಿ ಪಕ್ಷೇತರರು ಜಯಗಳಿಸಿದ್ದು ಬಿಟ್ಟರೆ ಉಳಿದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಇಲ್ಲಿ ಗೆಲುವು ಸಿಕ್ಕಿದೆ.

ನೂರಾರು ವರ್ಷ ಇತಿಹಾಸವಿರುವ ಕಾಂಗ್ರೆಸ್ಸಿಗೆ ತಾಲೂಕಿನ ಎರಡು ಬ್ಲಾಕ್‌ಗಳಿಗೆ ಹೊಸದಾಗಿ ಅಧ್ಯಕ್ಷರನ್ನು ಪಕ್ಷದ ಹೈಕಮಾಂಡ್‌ ನೇಮಕ ಮಾಡಿದೆ. ಹರಪನಹಳ್ಳಿ ಬ್ಲಾಕ್‌ಗೆ ಎಂ.ವಿ. ಅಂಜಿನಪ್ಪ ಹಾಗೂ ಚಿಗಟೇರಿ ಬ್ಲಾಕ್‌ಗೆ ಮೈದೂರು ಕುಬೇರಪ್ಪ ಅವರು ಸಾರಥ್ಯ ವಹಿಸಿಕೊಂಡಿದ್ದಾರೆ. ಇಂದು(ಶನಿವಾರ) ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಪದಗ್ರಹಣ ಮಾಡುತ್ತಿದ್ದಾರೆ.

ಎಂ.ವಿ. ಅಂಜಿನಪ್ಪ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದು, ಹರಪನಹಳ್ಳಿ ಪುರಸಭೆಗೆ 5 ಬಾರಿ ಸದಸ್ಯರಾಗಿದ್ದು, ಒಂದು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ, ಎನ್‌ಎಸ್‌ಯುಐ ಹಾಗೂ ಯುತ್‌ ಕಾಂಗ್ರೆಸ್‌ ಸಂಘಟನೆ ಮಾಡಿದ್ದಾರೆ.

ಮೈದೂರು ಕುಬೇರಪ್ಪ ಅವರು ಮಂಡಲ ಪಂಚಾಯಿತಿ ಸದಸ್ಯರಾಗಿ, ಗ್ರಾಪಂ ಅಧ್ಯಕ್ಷರಾಗಿ, ತಾಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಪಿ. ಪ್ರಕಾಶ ಅವರ ಜತೆಗೆ ಕಾಂಗ್ರೆಸ್‌ ಸೇರಿ ಇದೀಗ ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಇಂದು (ಶನಿವಾರ) ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ಎಂ.ವಿ. ಅಂಜಿನಪ್ಪ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ...1. ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಕ್ಕೆ ಏನನ್ನಿಸುತ್ತದೆ?

- ಸಂತಸವಾಗಿದೆ. ಸಾಕಷ್ಟು ಜವಾಬ್ದಾರಿ ನನ್ನ ಮೇಲಿದೆ.

2. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂ.ಪಿ. ಲತಾ ಹಾಗೂ ಎನ್‌. ಕೊಟ್ರೇಶ ಮಧ್ಯೆ ಹಂಚಿಹೋಗಿದ್ದರು. ಒಂದುಗೂಡಿಸುವ ಪ್ರಯತ್ನ ನಡೆಸುತ್ತೀರಾ?

- ಹೌದು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ. ಅಧ್ಯಕ್ಷನಾಗಿ ನೇಮಕವಾದ ಕೂಡಲೇ ಕಾಂಗ್ರೆಸ್‌ನ ಅನೇಕ ಹಿರಿಯ, ಕಿರಿಯ ಮುಖಂಡರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಹಳೆಯದನ್ನೆಲ್ಲ ಮರೆತು ಕಾಂಗ್ರೆಸ್‌ ಬಲಪಡಿಸಲು ಸಹಕಾರ ನೀಡಲು ಅನೇಕರು ಒಪ್ಪಿದ್ದಾರೆ. ನಮ್ಮದು ಒಂದೇ ಬಣ, ಒಂದೇ ಕಾಂಗ್ರೆಸ್‌.

3. ಈ ಕುರಿತು ಶಾಸಕರು ಏನೆನ್ನುತ್ತಾರೆ?

- ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ ಒಗ್ಗೂಡಿಸಲು, ಸದೃಡಗೊಳಿಸಲು ಸಂತಸದಿಂದ ಒಪ್ಪಿದ್ದಾರೆ. ಇತ್ತೀಚೆಗೆ ಹಿರಿಯ ಮುಖಂಡ ಸಿ. ಚಂದ್ರಶೇಖರ ಭಟ್‌ ಅವರ ನಿವಾಸದಲ್ಲಿ ನಡೆದ ಸಭೆಗೆ ಆಗಮಿಸಿ ಚರ್ಚಿಸಿದ್ದಾರೆ. ಆ ಬಣ ಈ ಬಣ ಎಂಬುದಿಲ್ಲ. ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಒಂದೇ. ಒಟ್ಟಾಗಿ ಮುಂಬರುವ ಚುನಾವಣೆ ಎದುರಿಸೋಣ ಎಂದು ಹೇಳಿದ್ದಾರೆ. ನಾನು ಶಾಸಕರ, ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಂಡು ಅವರಿವರೆನ್ನದೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷವನ್ನು ಕಟ್ಟುವ ಪ್ರಯತ್ನ ಮುಂದುವರಿಸುತ್ತೇನೆ.

4. ಲೋಕಸಭಾ ಚುನಾವಣೆ ಇದೆ. ಮುಂದೆ ತಾಪಂ, ಜಿಪಂ ಚುನಾವಣೆಗಳು ಬರಲಿವೆ. ಆದ್ದರಿಂದ ಕಾಂಗ್ರೆಸ್‌ ಸಂಘಟನೆಗೆ ಏನೇನು ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

- 150 ವರ್ಷ ಇತಿಹಾಸವಿರುವ ಕಾಂಗ್ರೆಸ್‌, ಸಿದ್ದರಾಮಯ್ಯನವರ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಲ್ಲದೇ ಉತ್ತಮ ಬಜೆಟ್ ನೀಡಿದ್ದಾರೆ. ಬೂತ್‌ ಮಟ್ಟದಲ್ಲಿ ಸಮಿತಿಗಳನ್ನು ಮಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಮನೆ- ಮನೆಗಳಿಗೆ ಮುಟ್ಟಿಸಿ ಪಕ್ಷ ಸದೃಢಗೊಳಿಸಿ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ.

5. ಕಾಂಗ್ರೆಸ್‌ ಸಮಾವೇಶ ಮಾಡುವ ಯೋಜನೆ ಇದೆಯಾ, ಇದ್ದರೆ ಯಾವಾಗ?

- ಲೋಕಸಭಾ ಚುನಾವಣೆ ಪೂರ್ವದಲ್ಲಿಯೇ ಬೃಹತ್‌ ಕಾಂಗ್ರೆಸ್‌ ಸಮಾವೇಶ ಹಮ್ಮಿಕೊಳ್ಳುವ ಯೋಜನೆ ಇದೆ.

6. ಹರಪನಹಳ್ಳಿ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಏನು ಹೇಳುತ್ತೀರಿ?

- ಹರಪನಹಳ್ಳಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಮಾಡುವ ಯೋಜನೆ ಇದೆ. ಐ.ಬಿ. ವೃತ್ತದ ಅಭಿವೃದ್ಧಿ, ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಶಾಸಕಿ ಎಂ.ಪಿ. ಲತಾ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

7. ಪುರಸಭಾ ಸದಸ್ಯರೂ ಆಗಿರುವ ನೀವು ಹರಪನಹಳ್ಳಿ ಪಟ್ಟಣದ ಅಭಿವೃದ್ಧಿ ಬಗ್ಗೆ ಹೇಳುವಿರಾ?

- ಹರಪನಹಳ್ಳಿ ಪಟ್ಟಣಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ ಆಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಂದಿದೆ. ಈಗಾಗಲೇ ಟೆಂಡರ್‌ ಹಂತದಲ್ಲಿದೆ. ಕೆರೆಗಳ ಅಭಿವೃದ್ಧಿಗೆ ₹40 ಕೋಟಿ ಅನುದಾನ ಬಂದಿದೆ. ಹೀಗೆ ಶಾಸಕರು ಪಟ್ಟಣ ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.

8. ಅಂತಿಮವಾಗಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಏನು ಹೇಳುತ್ತೀರಿ?

- ಇನ್ನು ಮುಂದೆ ಬ್ಯಾಗ್‌ನವರು, ಅವರು ಇವರು ಎನ್ನುವಂತಿಲ್ಲ. ಇನ್ನು ಕೆಲವರು ಮುನಿಸಿಕೊಂಡವರನ್ನು ಮನವೊಲಿಸಿ ಜತೆಗೆ ಕರೆದುಕೊಂಡು ಕಾಂಗ್ರೆಸ್‌ ಸಂಘಟಿಸಿಸುವ ವಿಶ್ವಾಸ ನನಗಿದೆ.