ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ: ಶಾಸಕ ಎಂ.ವೈ. ಪಾಟೀಲ್‌

| Published : Jan 26 2024, 01:48 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಜಿಲ್ಲೆಯ ಜನ ಪಶ್ಚಾತಾಪ ಪಟ್ಟಿದ್ದಾರೆ. ಅದಕ್ಕೆ ಪ್ರಾಯಶ್ಚಿತವಾಗಿ ಈ ಬಾರಿ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ಖರ್ಗೆ ಕೈ ಬಲಪಡಿಸೋಣ. ಈ ನಿಟ್ಟಿನಲ್ಲಿ ಪಕ್ಷವನ್ನೂ ಬೂತ್ ಮಟ್ಟದಿಂದ ಗಟ್ಟಿಗೊಳಿಸುವ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕು.

ಕನ್ನಡಪ್ರಭ ವಾರ್ತೆ ಚವಡಾಪುರ

2018ರಲ್ಲಿ ನನ್ನನ್ನು ದುಡಿಸಿಕೊಂಡು ಟಿಕೆಟ್ ನೀಡದೆ ಬಿಜೆಪಿಗರು ಕೈಬಿಟ್ಟಾಗ ನನ್ನನ್ನು ಪಕ್ಷಕ್ಕೆ ಕರೆದು ಟಿಕೆಟ್ ನೀಡಿ ಗೆಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸುವ ಸುಯೋಗ ನಮ್ಮ ಮುಂದಿದೆ. ಅಸೆಂಬ್ಲಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಗೆಲ್ಲಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಋಣ ತೀರಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.

ಅಫಜಲ್ಪುರ ಪಟ್ಟಣದ ನ್ಯಾಷನಲ್ ಫಂಕ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಜಿಲ್ಲೆಯ ಜನ ಪಶ್ಚಾತಾಪ ಪಟ್ಟಿದ್ದಾರೆ. ಅದಕ್ಕೆ ಪ್ರಾಯಶ್ಚಿತವಾಗಿ ಈ ಬಾರಿ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ಖರ್ಗೆ ಕೈ ಬಲಪಡಿಸೋಣ. ಈ ನಿಟ್ಟಿನಲ್ಲಿ ಪಕ್ಷವನ್ನೂ ಬೂತ್ ಮಟ್ಟದಿಂದ ಗಟ್ಟಿಗೊಳಿಸುವ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕು. ಕಾರ್ಯಕರ್ತರ ಮಾತುಗಳಿಗೆ ಮನ್ನಣೆ ನೀಡಿ ಅವರನ್ನು ಹುರಿದುಂಬಿಸುವ ಕೆಲಸ ಮಾಡಿ ಎಂದು ಕರೆ ನೀಡಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾದ್ಯಕ್ಷ ಜೆ.ಎಂ. ಕೊರಬು ಮಾತನಾಡಿ, ಪಂಚ ಗ್ಯಾರಂಟಿಗಳಿಂದ ರಾಜ್ಯದ ಜನರಿಗೆ ಭಾರಿ ಅನುಕೂಲವಾಗಿದೆ. ಈ ಬಾರಿಯ ಲೋಕ ಸಮರ ಗೆಲ್ಲಲು ಪಂಚ ಗ್ಯಾರಂಟಿಗಳು ಸಹಕಾರಿಯಾಗಲಿವೆ. ಅಲ್ಲದೆ ಈ ಬಾರಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಭಾರಿ ಬಹುಮತದ ಮೂಲಕ ಆಯ್ಕೆಗೊಳಿಸಿ ದಾಖಲೆ ನಿರ್ಮಿಸುವ ಅವಕಾಶ ನಮ್ಮ ಮುಂದಿದೆ ಎಂದರು.

ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡಿ, ಅಫಜಲ್ಪುರ ತಾಲೂಕಿನಲ್ಲಿ ಕಾಂಗ್ರೆಸ್ ಬೂತ್ ಮಟ್ಟದಿಂದ ಗಟ್ಟಿಯಾಗಿ ಬೆಳೆದಿದೆ. ನಮ್ಮ ಕಾರ್ಯಕರ್ತರನ್ನು ಅಲುಗಾಡಿಸುವವರು ಯಾರು ಇಲ್ಲ. ತಾಲೂಕಿನಲ್ಲಿ ವಿರೋಧ ಪಕ್ಷ ಎನ್ನುವುದು ದಿಕ್ಕಿಲ್ಲದಂತಾಗಿದೆ. ಜಾತ್ಯಾತೀತ ಎಂದು ತಿರುಗಿದವರು ಸಿಕ್ಕವರ ಮನೆ ಬಾಗಿಲುಗಳಿಗೆ ತಿರುಗುತ್ತಿದ್ದಾರೆ ಎಂದ ಅವರು ನಮ್ಮ ಕಾರ್ಯಕರ್ತರು ಹುಮ್ಮಸ್ಸು ಕಳೆದುಕೊಳ್ಳದೆ ಲೋಕ ಸಮರ ಗೆಲ್ಲುವುದಕ್ಕಾಗಿ ಶ್ರಮಿಸಬೇಕು, ಮುಖಂಡರೆನಿಸಿಕೊಂಡವರಿಂದಲೂ ಕೆಲವು ತಪ್ಪುಗಳಾಗುತ್ತವೆ. ನೀವು ನೇರವಾಗಿ ಅದನ್ನು ಪ್ರಶ್ನಿಸಿ, ವೈಮನಸ್ಸುಗಳನ್ನು ಬದಿಗಿಟ್ಟು ಲೋಕಸಮರ ಗೆಲ್ಲುವ ಸಂಕಲ್ಪ ಮಾಡೋಣ ಎಂದರು.

ಮುಖಂಡರಾದ ಪಪ್ಪು ಪಟೇಲ್, ಸಿದ್ದಾರ್ಥ ಬಸರಿಗಿಡ, ಮತೀನ ಪಟೇಲ, ಲಚ್ಚಪ್ಪ ಜಮಾದಾರ, ರೇಣುಕಾ ಸಿಂಗೆ, ರಮೇಶ ಪೂಜಾರಿ, ಮಶಾಕ್ ಪಟೇಲ್, ಚಂದ್ರಶೇಖರ ಕರ್ಜಗಿ ಮಾತನಾಡಿದರು.

ಸಭೆಯ ಬಳಿಕ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಶಾಸಕ ಎಂ.ವೈ ಪಾಟೀಲ್ ಸನ್ಮಾನಿಸಿ ಜವಾಬ್ದಾರಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜ್ಞಾನೇಶ್ವರಿ ಪಾಟೀಲ್, ಡಾ. ಹನುಮಂತರಾವ ದೊಡ್ಮನಿ, ರೇಣುಕಾ ಸಿಂಗೆ, ಎಸ್.ಎಸ್ ಪಾಟೀಲ್, ಶರಣು ಕುಂಬಾರ, ಗೌತಮ ಸಕ್ಕರಗಿ, ಶಿವಪುತ್ರಪ್ಪ ಸಂಗೋಳಗಿ, ಕಾಂತು ಮ್ಯಾಳೇಶಿ, ಮಹಾಲಿಂಗ ಅಂಗಡಿ, ಸುಭಾಷ ರೂಗಿ, ಅನಸೂಯ ಸೂಲೆಕರ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.