ಬಡಜನರ ಹಿತಕ್ಕಾಗಿ ಶ್ರಮಿಸಿದ ಕಾಂಗ್ರಸ್‌ : ರಘುಮೂರ್ತಿ

| Published : Jun 20 2024, 01:01 AM IST

ಸಾರಾಂಶ

ಚಳ್ಳಕೆರೆ ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಲೋಕಸಭಾ ಚುನಾವಣೆ ಸೋಲಿನ ಆತ್ಮವಿಮರ್ಶೆ ಸಭೆ । ಗೆಲುವು ಸಾಧಿಸಿದ ಡಿ.ಟಿ.ಶ್ರೀನಿವಾಸ್‌ಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ ರಾಷ್ಟ್ರದ ಇತಿಹಾಸದಲ್ಲಿ ಲಕ್ಷಾಂತರ ಬಡಜನರ ಹಿತಕ್ಕಾಗಿ ಶ್ರಮಿಸಿದ ಪಕ್ಷ ಕಾಂಗ್ರೆಸ್. ಸೋಲು ಮತ್ತು ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸಿ ಇಂದು ರಾಷ್ಟ್ರ ಮತ್ತು ರಾಜ್ಯದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಲೋಕಸಭಾ ಚುನಾವಣೆ ಸೋಲು, ಆಗ್ನೇಯ ಶಿಕ್ಷಕರ ಕ್ಷೇತ್ರದ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಆತ್ಮವಿಮರ್ಶೆಯ ಜೊತೆಗೆ ಹೊಸ ಆಯಾಮವನ್ನು ಸೃಷ್ಠಿಸಿದೆ ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಬುಧವಾರ ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ಸಮಾಲೋಚನೆ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗೆ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಮತ ನೀಡಿದ್ದರೂ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬೇರೆ ಕ್ಷೇತ್ರದಲ್ಲಿ ಮತ ಕಡಿಮೆಗಳಿಸಿದ್ದು ಸೋಲಿಗೆ ಕಾರಣವಾಗಿದೆ. ಚಂದ್ರಪ್ಪನವರು ಕಳೆದ ಹತ್ತು ವರ್ಷಗಳಿಂದ ಈ ಜಿಲ್ಲೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಕ್ಷದ ಸಂಘಟನೆಗೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಬೇಕೆಂಬುವುದು ನನ್ನ ಮಹದಾಸೆ ಎಂದರು.

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶಿಕ್ಷಕರ ಸಮೂಹದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಆಗ್ನೇಯ ಶಿಕ್ಷಕರ ಕ್ಷೇತ್ರ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಕಾಂಗ್ರೆಸ್ ಪಕ್ಷ ನನಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಿ ಗೆಲುವು ಸಾಧಿಸಲು ಸಹಕಾರ ನೀಡಿದೆ. ನಿರೀಕ್ಷೆಗೂ ಮೀರಿ ಹೆಚ್ಚಿನ ಮತಗಳು ಬಂದಿವೆ. ಬಹುತೇಕ ಶಿಕ್ಷಕರು ಮತ ನೀಡಿದ್ದಾರೆ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡುವೆ. ಈ ಗೆಲುವು ಶಿಕ್ಷಕರ ಸಮೂಹದ ಸ್ನೇಹಿತರು ಹಾಗೂ ಕಾಂಗ್ರೆಸ್ ಪಕ್ಷ ಎಲ್ಲಾ ಹಂತದ ನಾಯಕರಿಗೆ ಸೇರಿದೆ. ಮುಂಬರುವ ಚುನಾವಣೆಯಲ್ಲೂ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿ ಗೆಲುವಿಗೆ ಶ್ರಮಿಸುವೆ. ಕ್ಷೇತ್ರದ ಶಿಕ್ಷಕರ ಹಲವಾರು ಬೇಡಿಕೆಗಳ ಬಗ್ಗೆ ಈಗಾಗಲೇ ಮನವಿ ಸ್ವೀಕರಿಸಿದ್ದೇನೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದರು.

ಲೋಕಸಭಾ ಚುನಾವಣೆಯಲ್ಲಿ ಸೋಲುಂಡರು ಸಹ ಸೋಲನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದು ಮಾತು ಆರಂಭಿಸಿದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯದ ಎಲ್ಲಾ ಪ್ರಚಾರ ಮಾಧ್ಯಮಗಳಲ್ಲಿ ಚಿತ್ರದುರ್ಗ ಕ್ಷೇತ್ರ ಕಾಂಗ್ರೆಸ್ ಪಕ್ಷ ಗೆಲಲ್ಲಿದೆ ಎಂದು ಪ್ರಚಾರ ನೀಡಲಾಗಿತ್ತು. ಕಾರ್ಯಕರ್ತರು, ಮುಖಂಡರು ಸಹ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದಾರೆ. ಚುನಾವಣೆ ಸೋಲಿನಿಂದ ನಾನು ಕಂಗೆಟ್ಟಿಲ್ಲ, ಕಾಂಗ್ರೆಸ್ ಪಕ್ಷ ದೊಡ್ಡ ಶಕ್ತಿ ಹೊಂದಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ವಿಶ್ವಾಸದಿಂದ ಪಕ್ಷ ಸಂಘಟಿಸುವ ಕಾರ್ಯ ಮುಂದುವರೆಸುವೆ ಎಂದರು.

ಚುನಾವಣೆ ಸೋಲಿನ ಬಗ್ಗೆ ಜಿಪಂ ಮಾಜಿ ಸದಸ್ಯ ಟಿ.ರವಿಕುಮಾರ್, ಬಾಬುರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಎಸ್.ಎಚ್.ಸೈಯದ್, ಗದ್ದಿಗೆ ತಿಪ್ಪೇಸ್ವಾಮಿ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಬಿ.ಪಿ.ಪ್ರಕಾಶ್‌ಮೂರ್ತಿ, ಶಶಿಧರ, ಟಿ.ಪ್ರಭುದೇವ್, ಸಿ.ವೀರಭದ್ರಬಾಬು, ಬಿ.ತಿಪ್ಪಣ್ಣ ಮರಿಕುಂಟೆ, ಕರಿಯಪ್ಪ, ಅನ್ವರ್‌ ಮಾಸ್ಟರ್, ಸಿರಿಯಣ್ಣ, ಬಡಗಿ ಪಾಪಣ್ಣ, ನೇತಾಜಿ ಪ್ರಸನ್ನ, ಟಿ.ವೀರಭದ್ರ, ಟಿ.ಮಲ್ಲಿಕಾರ್ಜುನ್, ಓ.ರಂಗಸ್ವಾಮಿ, ಗೀತಾಬಾಯಿ, ಶಿಕ್ಷಕರ ಕ್ಷೇತ್ರದಿಂದ ಜಿ.ಟಿ.ವೀರಭದ್ರ ಸ್ವಾಮಿ, ದೊಡ್ಡಯ್ಯ, ಡಿ.ವೀರಣ್ಣ, ಮೂಡಲಗಿರಿಯಪ್ಪ, ಲಕ್ಷ್ಮಣ, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.