ಸಾರಾಂಶ
ಪ್ರವಾಸಿಗರು ಸೇರುವ ಜಾಗದಲ್ಲಿ ಸೂಕ್ತ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿ ಪ್ರದರ್ಶಿಸಿಲ್ಲ. ಭದ್ರತಾ ವೈಫಲ್ಯವೇ ಈ ದಾಳಿಗೆ ಕಾರಣವಾಗಿದೆ. ಇದನ್ನೇ ಉಗ್ರರು ಸದ್ಭಳಕೆ ಮಾಡಿಕೊಂಡು ನರಮೇಧ ನಡೆಸಿದ್ದಾರೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಮಂಡ್ಯಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಫಾದಕರು ನಡೆಸಿದ ಹಿಂದೂಗಳ ನರಮೇಧ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮೇಣದ ಬತ್ತಿ ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯರಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಅಜಿತ್ ದೋವಲ್ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಸಿಗರು ಸೇರುವ ಜಾಗದಲ್ಲಿ ಸೂಕ್ತ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿ ಪ್ರದರ್ಶಿಸಿಲ್ಲ. ಭದ್ರತಾ ವೈಫಲ್ಯವೇ ಈ ದಾಳಿಗೆ ಕಾರಣವಾಗಿದೆ. ಇದನ್ನೇ ಉಗ್ರರು ಸದ್ಭಳಕೆ ಮಾಡಿಕೊಂಡು ನರಮೇಧ ನಡೆಸಿದ್ದಾರೆ ಎಂದು ದೂರಿದರು.ಪುಲ್ವಾಮಾ ದಾಳಿ ಸಮಯದಲ್ಲೇ ಉಗ್ರರ ಹುಟ್ಟಡಗಿಸುವ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಆನಂತರದಲ್ಲಿ ಉಗ್ರರ ವಿಷಯದಲ್ಲಿ ಮೃದು ಧೋರಣೆ ತಾಳಿದ್ದಾರೆ ಎಂದು ಕಿಡಿಕಾರಿದರು.ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಹಿಂದೂಗಳ ಮತ ಬ್ಯಾಂಕ್ ಮಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರು ಉಗ್ರರನ್ನು ಸಂಪೂರ್ಣವಾಗಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಪದೇಪದೇ ಅಮಾಯಕರ ಮೇಲೆ ದಾಳಿ ನಡೆಸಿ ಕೊಲ್ಲುವ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಇದಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿಯಾಗಿದೆ. ಈಗಲಾದರೂ ಉಗ್ರವಾದ ವಿಷಯಗಳಲ್ಲಿ ಕಠಿಣ ಧೋರಣೆಯನ್ನು ತಳೆದು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಡಾ ಅಧ್ಯಕ್ಷ ನಯೀಂ, ಮುಖಂಡರಾದ ಎಚ್.ಕೆ.ರುದ್ರಪ್ಪ, ಶ್ರೀಧರ್, ಗುರು, ಮಹೇಶ್, ಅಂಜನಾ ಶ್ರೀಕಾಂತ್, ವಿಜಯ್‌ಕುಮಾರ್, ಪ್ರಶಾಂತ್‌ಬಾಬು, ಸುರೇಶ್ ಭಾಗವಹಿಸಿದ್ದರು.
-----------25ಕೆಎಂಎನ್ ಡಿ24 ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.