ಸಾರಾಂಶ
ಹಾನಗಲ್ಲ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ಬೆಂಬಲಿಸಿ, ಯೋಧರ ಶ್ರೇಯಸ್ಸಿಗೆ ಪ್ರಾರ್ಥಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮದೇವಿ ದೇವಸ್ಥಾನಗಳು, ಇಲ್ಲಿನ ಅಲಾಹಜರತ್ ಕಾಶ್ಮೀರಿ ದರ್ಗಾದಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸಿದರು.
ಇಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿದ್ದರು. ಗ್ರಾಮದೇವಿಗೆ ರಾಷ್ಟ್ರಧ್ವಜ ಸಮರ್ಪಿಸುವ ಮೂಲಕ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿ, ಉಗ್ರಗಾಮಿಗಳ ಹುಟ್ಟಡಗಿಸಲಿ, ಯೋಧರಿಗೆ ಶ್ರೇಯಸ್ಸು ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಅಲಾಹಜರತ್ ಕಾಶ್ಮೀರಿ ದರ್ಗಾದಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿ, ಭಾರತೀಯ ಸೇನೆ ಹಾಗೂ ಭಾರತ ಮಾತೆಗೆ ಜಯಕಾರ ಹಾಕಲಾಯಿತು.ಈ ಸಂದರ್ಭದಲ್ಲಿ ಶಾಸಕ ಮಾನೆ ಮಾತನಾಡಿ, ತಾಲೂಕಿನಾದ್ಯಂತ ಪ್ರತಿಯೊಂದು ಗ್ರಾಮಗಳ ಗ್ರಾಮದೇವಿ ದೇವಸ್ಥಾನಗಳು, ಮಸೀದಿಗಳಲ್ಲಿ ಏಕಕಾಲಕ್ಕೆ ಪೂಜೆ ಸಲ್ಲಿಸುವ ಮೂಲಕ ಯೋಧರ ಒಳಿತಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಆತಂಕವಾದ ಅಂತ್ಯಗೊಳಿಸಿ ಭವ್ಯ ಭಾರತ ಕಟ್ಟಬೇಕಾದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಸೇನೆಯಲ್ಲಿ ಸಹ ವಿವಿಧ ಧರ್ಮಗಳಿಗೆ ಸೇರಿರುವ ಯೋಧರಿದ್ದು, ದೇಶಾಭಿಮಾನ ಮೆರೆದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ಪುಣ್ಯಭೂಮಿಯಾಗಿದೆ. ಈ ವಿಶ್ವಾಸವನ್ನು ಎಲ್ಲರಲ್ಲಿಯೂ ಮೂಡಿಸಿದರೆ ಭಾರತ ವಿಶ್ವಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವೆಲ್ಲರೂ ಭಾರತದ ಸರ್ಕಾರ ಮತ್ತು ಸೇನೆಯೊಂದಿಗೆ ಗಟ್ಟಿಯಾಗಿ ನಿಂತು ಈ ಹೋರಾಟದಲ್ಲಿ ವಿಜಯ ಸಾಧಿಸೋಣ ಎಂದು ಹೇಳಿದರು.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ನಮ್ಮೆಲ್ಲರಿಗೂ ಗೌರವ, ಹೆಮ್ಮೆ ತರುವ ರೀತಿಯಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸುತ್ತಿದೆ. ಆತಂಕವಾದವನ್ನು ಮಟ್ಟ ಹಾಕಿ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಸೇನೆ ಪರಾಕ್ರಮ ಮೆರೆಯುತ್ತಿರುವುದು ಗರ್ವದ ಸಂಗತಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಮಮತಾ ಆರೆಗೊಪ್ಪ, ಖುರ್ಷಿದ್ ಹುಲ್ಲತ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಮುಖಂಡರಾದ ಗುರು ನಿಂಗೋಜಿ, ನಿಯಾಜ್ ಅಹ್ಮದ್ ಸರ್ವಿಕೇರಿ, ಸಿಕಂದರ್ ವಾಲಿಕಾರ, ಸಂತೋಷ ಸುಣಗಾರ, ಮೌನೇಶ ಕಲಾಲ, ಇರ್ಫಾನ್ ಸೌದಾಗರ, ಇರ್ಫಾನ್ ಮಿಠಾಯಿಗಾರ, ಗನಿ ಪಾಳಾ, ರಾಜೂ ಗುಡಿ, ಮುಸ್ತಾಕ್ ಸುತಾರ, ಗೌಸ್ ತಂಡೂರ, ಮೇಕಾಜಿ ಕಲಾಲ, ಶಿವು ಭದ್ರಾವತಿ, ಸುರೇಶ ನಾಗಣ್ಣನವರ, ಖಂಡೋಜಿ ಬೋಸ್ಲೆ, ಪ್ರಸಾದಗೌಡ, ಮೇಘಾ ಸುಲಾಖೆ, ನಾಗರಾಜ ಆರೇರ, ನೌಶಾದ್ ರಾಣೇಬೆನ್ನೂರು ಉಪಸ್ಥಿತರಿದ್ದರು.