ಸಾರಾಂಶ
ಚುನಾವಣೆಗೆ ಟಿಕೆಟ್ ಸಿಕ್ಕಮೇಲೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನು ಮಾಡಿದ್ದಾರೆ. ಚುನಾವಣೆ ಮುಗಿದ ಮೇಲೆ ಜಿಲ್ಲೆಯತ್ತ ಮುಖವನ್ನೂ ಹಾಕಿಲ್ಲ. ಜಿಲ್ಲೆಯ ಬಗ್ಗೆ ಅವರಿಗೆ ಎಷ್ಟು ಕಳಕಳಿ ಇದೆ ಎನ್ನುವುದು ಇದೇ ಉದಾಹರಣೆ.
ಕಾರವಾರ: ಕಳೆದ ಒಂದು ವರ್ಷದಲ್ಲಿ ಶಾಸಕ ಸತೀಶ ಸೈಲ್ ಅವರು ಕಾರವಾರ- ಅಂಕೊಲಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇನು ಎಂದು ಪ್ರಶ್ನಿಸಿದರೆ ಶಂಭು ಶೆಟ್ಟಿ ಅವರಿಗೆ ಜಾಣ ಕುರುಡು. ಅದಕ್ಕೆ ಉತ್ತರವನ್ನೇ ಹೇಳುತ್ತಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದೆ ಅಭಿವೃದ್ಧಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಪ್ರಮುಖರು ತಿರುಗೇಟು ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಪ್ರಮುಖರು, ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯ ಬಗ್ಗೆ ಯಾವ ಕಳಕಳಿ ಇದೆ. ವಿಧಾನಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಚರ್ಚೆಗೆ ಬಂದಾಗ ತುಟಿ ಬಿಚ್ಚದೆ ಇದ್ದ ಇವರು ಜಿಲ್ಲೆಯ ಯಾವ ಸಮಸ್ಯೆಗೆ ಸ್ಪಂದಿಸಿದ ಉದಾಹರಣೆ ಇದೆ. ಚುನಾವಣೆಗೆ ಟಿಕೆಟ್ ಸಿಕ್ಕಮೇಲೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಮತ್ತೇನು ಮಾಡಿದ್ದಾರೆ. ಚುನಾವಣೆ ಮುಗಿದ ಮೇಲೆ ಜಿಲ್ಲೆಯತ್ತ ಮುಖವನ್ನೂ ಹಾಕಿಲ್ಲ. ಜಿಲ್ಲೆಯ ಬಗ್ಗೆ ಅವರಿಗೆ ಎಷ್ಟು ಕಳಕಳಿ ಇದೆ ಎನ್ನುವುದು ಇದೇ ಉದಾಹರಣೆ.
ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅಭಿವೃದ್ಧಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರೆ ಅಂಜಲಿ ಅವರಿಗೆ ಆಗಿದ್ದಾದರೂ ಏನು. ತಿಳಮಾತಿ ಕಾಮಗಾರಿ ಯಾರು ಶಾಸಕರಾಗಿದ್ದ ಅವಧಿಯಲ್ಲಿ ವಾಪಸ್ ಹೋಗಿದೆ ಎಂದು ದಾಖಲೆ ಪಡೆಯಲಿ. ಸೈಲ್ ಶಾಸಕರಾಗಿದ್ದ ಅವಧಿಯಲ್ಲೆ ಯೋಜನೆ ಸ್ಥಗಿತಗೊಂಡಿದೆ. ಇದೂ ಶಂಭು ಶೆಟ್ಟಿ ಅವರಿಗೆ ಸರಿಯಾದ ಮಾಹಿತಿ ಇಲ್ಲವೇ ಅಥವಾ ರೂಪಾಲಿ ಎಸ್. ನಾಯ್ಕ ಅವರ ಮೇಲೆ ಗೂಬೆ ಕೂರಿಸಲು ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾಗಿದೆ.ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ ವ್ಯಕ್ತವಾಗಿತ್ತು. ಸ್ಥಳೀಯರ ವಿರೋಧವೇ ಕ್ರೀಡಾಂಗಣ ನಿರ್ಮಾಣಕ್ಕೆ ಹಿನ್ನಡೆ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೇರವಡಿ ಉಳಗಾ ಸೇತುವೆಗೆ ಭೂಸ್ವಾಧೀನ ಸೇರಿದಂತೆ ಸ್ಪಷ್ಟ ಯೋಜನೆಯೆ ಇಲ್ಲದೆ ಕಾಮಗಾರಿ ಆರಂಭಿಸಿದ್ದೆ ವಿಳಂಬಕ್ಕೆ ಕಾರಣ. ರೂಪಾಲಿ ನಾಯ್ಕ ಅದಕ್ಕೆ ಹಣವನ್ನೂ ಬಿಡುಗಡೆ ಮಾಡಿಸಿದ್ದರು. ಅದೇ ರೀತಿ ಮಂಜಗುಣಿ ಗೋಕರ್ಣ ಸೇತುವೆ ಕೂಡ ಸೈಲ್ ಅವಧಿಯಲ್ಲೇ ಆರಂಭವಾಗಿತ್ತು. ಹಾಗಿದ್ದರೆ ಸೈಲ್ ಶಾಸಕರಾಗಿ ಒಂದು ವರ್ಷವಾದರೂ ಏಕೆ ಈ ಎರಡೂ ಸೇತುವೆಗಳನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ರೂಪಾಲಿ ಎಸ್. ನಾಯ್ಕ ಈ ಕ್ಷೇತ್ರದಲ್ಲಿ ಕೊರೋನಾ, ಪ್ರವಾಹದ ನಡುವೆಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ರೂಪಾಲಿ ನಾಯ್ಕ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಈಗ ನಡೆಯುತ್ತಿವೆಯೆ ಹೊರತೂ ಸೈಲ್ ಒಂದು ಅಭಿವೃದ್ಧಿ ಕಾಮಗಾರಿಯನ್ನೂ ತಂದಿಲ್ಲ ಎನ್ನುವುದನ್ನು ಕಾಂಗ್ರೆಸ್‌ನವರು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ದಾಖಲೆ ನೀಡಲಿ. ಕಾಂಗ್ರೆಸ್ ಈ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎನ್ನುವುದನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯಲು ಶಂಭು ಶೆಟ್ಟಿ ಬೇರೆ ಬೇರೆ ಮಾತುಗಳನ್ನಾಡುತ್ತಿದ್ದಾರೆ. ರೂಪಾಲಿ ಎಸ್.ನಾಯ್ಕ ಅವರ ಅವಧಿಯಲ್ಲಿ ಯಾವೆಲ್ಲ ಕಾಮಗಾರಿಗಳು ಆಗಿವೆ ಎನ್ನುವುದನ್ನು ಮಾಹಿತಿ ಹಕ್ಕಿನಲ್ಲಿ ಪಡೆದು ಅದನ್ನು ಪ್ರದರ್ಶಿಸಲಿ ಎಂದು ಬಿಜೆಪಿ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಆನಂದು ಗುನಗಿ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಅಮದಳ್ಳಿ, ಘಾಡಸೈ ಗ್ರಾಪಂ ಅಧ್ಯಕ್ಷರಾದ ಸುವರ್ಣಾ ಗಾಂವಕರ, ಉಪಾಧ್ಯಕ್ಷರು ಚೇತನ ಬಾಂದೇಕರ, ಸದಸ್ಯರಾದ ಚಂದಾ ನಾಯ್ಕ, ಕಿರಣ ಉಳಗೇಕರ, ಕೇರವಡಿ ಗ್ರಾಪಂ ಅಧ್ಯಕ್ಷರಾದ ರಾಮಚಂದ್ರ ನಾಯ್ಕ, ಮಾಜಿ ಅಧ್ಯಕ್ಷೆ ದೀಪಾ ನಾಯ್ಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.