ಸಾರಾಂಶ
ಕಾರವಾರ:
ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧವಾಗಿದೆ. ಅಲ್ಲಿಗೆ ದೇಶ ವಿರೋಧಿ ಚಟುವಟಿಕೆ ನಡೆಸುವುದು ಎಷ್ಟು ಸರಿ? ಭಾರತಮಾತೆಗೆ ಅವಮಾನವಾದರೆ ಭಾರತೀಯರು ಸಹಿಸುವುದಿಲ್ಲ ಎಂದು ಬಿಜೆಪಿ ವಿಶೇಷ ಆಹ್ವಾನಿತ ನಾಗರಾಜ ನಾಯಕ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಬಿಜೆಪಿ ವತಿಯಿಂದ ನಡೆದ ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಗಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಸೈಯ್ಯದ್ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಭಾರತದಲ್ಲಿ ಜನಿಸಿ, ಇಲ್ಲಿಯೇ ಬೆಳೆದು ಈ ರೀತಿ ಘೋಷಣೆ ಕೂಗುವುದನ್ನು ಯಾರು ಸಹಿಸುವುದಿಲ್ಲ. ಹೀಗಿದ್ದಾಗ್ಯೂ ಕಾಂಗ್ರೆಸ್ಸಿಗರು ತಮ್ಮ ದೇಶವಿರೋಧಿ ಕಾರ್ಯಕರ್ತರನ್ನು ತುಷ್ಟೀಕರಣ ಮಾಡುತ್ತಿರುವುದು ಸರಿಯಲ್ಲ ಎಂದರು.ಭಾರತದಿಂದಲೇ ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು. ಕಾಂಗ್ರೆಸ್ ಇರುವವರೆಗೂ ರಾಷ್ಟ್ರ ವಿರೊಧಿ ಕೃತ್ಯ ನಡೆಯುತ್ತಿರುತ್ತದೆ. ನಾಸಿರ್ ಅವರನ್ನು ಸಂಸತ್ತಿನಿಂದ ಹೊರಹಾಕಬೇಕು. ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ನೀಡಬಾರದು. ನೀಚರಿಗೆ, ಅಧಮರಿಗೆ ವಿಧಾನಸಭೆ, ಸಂಸತ್ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಕಿಡಿಕಾರಿದರು.ಒಂದು ತಾಸಿಗೂ ಅಧಿಕ ಕಾಲ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯ ಡಾ. ನಿತಿನ ಪಿಕಳೆ, ಮನೋಜ ಭಟ್, ನಯನಾ ನೀಲಾವರ, ದೇವಿದಾಸ ನಾಯ್ಕ, ದಿವ್ಯಾ ನಾಯ್ಕ, ನಾಗೆಶ ಕುರ್ಡೇಕರ, ಸುಭಾಸ ಗುನಗಿ ಮೊದಲಾದವರು ಇದ್ದರು.