ಉಡುಪಿ: ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡದೇ ತನ್ನ ಮಹಿಳಾ ವಿರೋಧಿ ಮನೋಭಾವವನ್ನು ಬಹಿರಂಗ ಮಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಹೇಳಿದ್ದಾರೆ.ಚುನಾವಣೆಯ ಸಂದರ್ಭ ಮಹಿಳಾ ನ್ಯಾಯ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ದೊಡ್ಡದೊಡ್ಡ ಭರವಸೆಗಳನ್ನು ನೀಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯ ಸಂದರ್ಭ ಬಂದಾಗ ತನ್ನ ನಿಜವಾದ ಮುಖವನ್ನು ಪ್ರದರ್ಶಿಸಿದೆ. ಅರ್ಹ ಮಹಿಳಾ ನಾಯಕರನ್ನು ಸಚಿವ ಸಂಪುಟದಿಂದ ದೂರವಿಡುವ ಮೂಲಕ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಕಾಣುವ ತನ್ನ ರಾಜಕೀಯ ಧೋರಣೆಯನ್ನು ಕಾಂಗ್ರೆಸ್ ಸ್ಪಷ್ಟಪಡಿಸಿದೆ ಎಂದವರು ಆರೋಪಿಸಿದ್ದಾರೆ. 2026ರಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ್ದ (ಸಂವಿಧಾನ 131ನೇ ತಿದ್ದುಪಡಿ) ಮಸೂದೆಗೆ ಇದೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಮಹಿಳಾ ಸಬಲೀಕರಣದ ಕುರಿತು ಕಾಂಗ್ರೆಸ್‌ನ ಮಾತು ಮತ್ತು ನಡೆಗೆ ಸಂಬಂಧ ಇಲ್ಲ ಕಾಂಗ್ರೆಸ್ ಸಾಬೀತು ಮಾಡಿದೆ ಎಂದವರು ಹೇಳಿಕೆಯಲ್ಲಿ ಹೇಳಿದ್ದಾರೆ.

ಮಹಿಳೆಯರಿಗೆ ಆಡಳಿತದಲ್ಲಿ ನಿರ್ಧಾರ ಕೈಗೊಳ್ಳುವ ಅವಕಾಶ, ಸಮಾನ ಪಾಲುದಾರಿಕೆ ಮತ್ತು ಗೌರವಯುತ ಸ್ಥಾನಮಾನವನ್ನು ಕಲ್ಪಿಸುವುದೇ ನಿಜವಾದ ಮಹಿಳಾ ಸಬಲೀಕರಣ. ಭಾರತೀಯ ಸಂಸ್ಕೃತಿಯು ಮಹಿಳೆಯನ್ನು ಶಕ್ತಿ, ಜ್ಞಾನ ಮತ್ತು ಮಾತೃತ್ವದ ಪ್ರತೀಕವಾಗಿ ಪೂಜಿಸುವ ಪರಂಪರೆ ಹೊಂದಿದೆ. ಆದ್ದರಿಂದ ಮಹಿಳಾ ಸಬಲೀಕರಣ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಪ್ರತಿಬಿಂಬವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣವನ್ನು ಕೇವಲ ಘೋಷಣೆಗಳು ಮತ್ತು ಉಚಿತ ಯೋಜನೆಗಳಿಗೆ ಸೀಮಿತಗೊಳಿಸಿದೆ ಎಂದಿದ್ದಾರೆ. ಕರ್ನಾಟಕದ ಮಹಿಳೆಯರು ಈ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವ ಸರ್ಕಾರವನ್ನು ಅವರು ಗುರುತಿಸುತ್ತಾರೆ. ಮಹಿಳೆಯರನ್ನು ಕಡೆಗಣಿಸುವ ಸರ್ಕಾರಕ್ಕೂ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡುತ್ತಾರೆ ಎಂದು ರೇಷ್ಮಾ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನ್ಯಾಯಯುತ ಪಾಲು ನೀಡಲು ಏಕೆ ಹಿಂಜರಿಯುತ್ತಿದೆ ಎಂಬುದನ್ನುಸ್ಪಷ್ಟಪಡಿಸಬೇಕು. ಇನ್ನೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಸಿಗಬಹುದು ಎನ್ನುವ ಆಸೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತೆಯರ ಬಗ್ಗೆ ಅನುಕಂಪವಿದೆ. ಬಿಜೆಪಿ ಸಿದ್ದಾಂತಗಳಿಗೆ ಬೆಲೆ ಕೊಟ್ಟು ನಮ್ಮ ಪಕ್ಷಕ್ಕೆ ಬರಲು ಬಯಸುವ ಕಾಂಗ್ರೆಸ್ ಕಾರ್ಯಕರ್ತ ಮಹಿಳೆಯರಿಗೆ ಸ್ವಾಗತ ಎಂದು ರೇಷ್ಮಾ ಹೇಳಿದ್ದಾರೆ.