ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ತಾಲೂಕಿನ ಕುರುಬನ ಕಟ್ಟೆ ಮಠದಲ್ಲಿನ ಶ್ರೀ ಮಂಟೇಸ್ವಾಮಿ ಮೂರ್ತಿಗೆ ನೂತನವಾಗಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಠದ ಧರ್ಮಾಧಿಕಾರಿ ಪರಮಪೂಜ್ಯ ವರುಣ ಲಿಂಗರಾಜೇಅರಸ್ ಅವರ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಹೋಮ, ವಿಶೇಷ ಪೂಜೆಗಳು ಸಾಂಘವಾಗಿ ಜರುಗಿತು.ಆದಿಗುರು ಶ್ರೀ ಮಂಟೇಸ್ವಾಮಿ ಶಿಷ್ಯಂದಿರಾದ ಶ್ರೀ ಜ್ಯೋತಿಲಿಂಗಯ್ಯ ಚೆನ್ನಯ್ಯನವರ ಗದ್ದಿಗೆಯ ಮೇಲೆ 9.5 ಕೆಜಿಯ ಶ್ರೀ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ಮಠದ ಹೊರವಲಯದಲ್ಲಿರುವ ತಾವರೆಕಟ್ಟೆಯಲ್ಲಿ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಗದ್ದುಗೆ ಹಾಗೂ ಉತ್ಸವ ಮೂರ್ತಿಗಳಾದ ಕಂಡಾಯಗಳಿಗೆ ಪೂಜೆ ಸಲ್ಲಿಸಲಾಯಿತು . ಕಂಡಾಯಗಳನ್ನು ಮೆರವಣಿಗೆ ಮೂಲಕ ಗದ್ದಿಗೆಗೆ ತರಲಾಯಿತು. ನೂತನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಠದಲ್ಲಿ ವಿಶೇಷ ಪೂಜೆ ಅಯೋಜಿಸಿದ್ದರಿಂದ ಸಾವಿರಾರು ಮಂದಿ ಭಕ್ತ ಸಮೂಹ ಆಗಮಿಸಿ ದರ್ಶನ ಪಡೆದರು. ಮಠಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಠದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದಿದ್ದ ಭಕ್ತರಿಗೆ ಬೆಳಗ್ಗೆಯಿಂದಲೇ ಪ್ರಸಾದ ವ್ಯವಸ್ಥೆ ಮಾಡಿದ್ದರಿಂದ ದರ್ಶನ ಪಡೆದು ಪೂಜೆ ಸಲ್ಲಿಸಿದ ಭಕ್ತರು ಪ್ರಸಾದ ಸ್ವೀಕರಿಸಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಉದ್ಯಮಿ ವೀರಮಾದು, ತಿಮ್ಮರಾಜಿಪುರ ರಾಜು, ಕೆಂಪನಪಾಳ್ಯ ಮಹೇಶ್, ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದು ಪೂಜೆ ಸಲ್ಲಿಸಿದರು.