ಸಾರಾಂಶ
ವಾರಾಂತ್ಯ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಹೊರಜಿಲ್ಲೆಯ ಸಾವಿರಾರು ಮಂದಿ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಹೊತ್ತು ಬೀಚ್ ನಲ್ಲಿ ವಿಹಾರಕ್ಕೆ ಆಗಮಿಸಿದ್ದು, ಪ್ರವಾಸಿಗರನ್ನು ನಿಯಂತ್ರಿಸುವುದಕ್ಕೆ ಬೀಚ್ ಲೈಪ್ ಗಾರ್ಡ್ ಗಳು ಪ್ರಯಾಸಪಡಬೇಕಾಯಿತು. ಕೋವಿಡ್ ಎಚ್ಚರಿಕೆ ಕಡೆಗಣಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಾನುವಾರ ವಾರದ ರಜೆ ಮತ್ತು ಸೋಮವಾರ ಕ್ರಿಸ್ಮಸ್ ರಜೆ ಇದ್ದುದರಿಂದ ಇಲ್ಲಿನ ಮಲ್ಪೆ ಬೀಚ್ ನಲ್ಲಿ ಎರಡೂ ದಿನ ಸಂಜೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.ಎರಡು ದಿನಗಳ ರಜೆಯನ್ನು ಬಳಸಿಕೊಂಡು ಹೊರಜಿಲ್ಲೆಯ ಸಾವಿರಾರು ಮಂದಿ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಹೊತ್ತು ಬೀಚ್ ನಲ್ಲಿ ವಿಹಾರಕ್ಕೆ ಆಗಮಿಸಿದ್ದು, ಪ್ರವಾಸಿಗರನ್ನು ನಿಯಂತ್ರಿಸುವುದಕ್ಕೆ ಬೀಚ್ ಲೈಪ್ ಗಾರ್ಡ್ ಗಳು ಪ್ರಯಾಸಪಡಬೇಕಾಯಿತು.
ಉಡುಪಿ ಕೃಷ್ಣಮಠ ಮತ್ತು ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿಯೂ ಯಾತ್ರಾರ್ಥಿಗಳ ಸಂಖ್ಯೆ ಎಂದಿಗಿಂತ ಹೆಚ್ಚಿತ್ತು. ಎರಡು ದಿನ ಸರಣಿ ರಜೆಯ ಜೊತೆಗೆ ಇದು ಶಾಲಾ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಮತ್ತು ಶಬರಿಮಲೆಗೆ ಹೋಗುವವರ ಸೀಸನ್ ಆಗಿರುವುದರಿಂದ ಮಾಲಾಧಾರಿಗಳು, ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೃಷ್ಣಮಠದಲ್ಲಂತೂ ಬೆಳಿಗ್ಗೆಯಿಂದ ಸಂಜೆವರೆಗೂ ಸರದಿ ಸಾಲಿನಲ್ಲಿ ಪ್ರವಾಸಿಗರು ಕರಗುತ್ತಲೇ ಇರಲಿಲ್ಲ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಧರಿಸುವಂತೆ ಸರ್ಕಾರ ಹೇಳಿದರೂ, ಮಾಸ್ಕ್ ಕಡ್ಡಾಯ ಮಾಡಿಲ್ಲ, ಆದ್ದರಿಂದ ಯಾತ್ರಾರ್ಥಿಗಳು ಬಹುತೇಕ ಮಾಸ್ಕ್ ಧರಿಸಿರಲಿಲ್ಲ.