ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಚಿವ ಸಂಪುಟ ರಚನೆ ಸೇರಿ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೂ.27 ರಂದು ಎಂದಿನಂತೆ ಸಂಭ್ರಮ ಸಡಗರದಿಂದ ನಗರದ ಕಲಾಮಂದಿರದಲ್ಲಿ ಸರ್ಕಾರದ ಜೊತೆಗೆ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ವಿವಿಧ ಜಿಲ್ಲಾ ಒಕ್ಕಲಿಗರ ಸಂಘವು ಘೋಷಿಸಿವೆ.

ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ವಿವಿಧ ಒಕ್ಕಲಿಗ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ನಗರದ ಜಲದರ್ಶಿನಿಯಲ್ಲಿ ಸಭೆ ನಡೆಸಿ, ಒಮ್ಮತದ ತೀರ್ಮಾನ ಘೋಷಿಸಿದವು.

ಆರಂಭದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಕರೆದು ಬೇರೊಂದು ದಿನದಂದು ಆಚರಿಸಲು ತೀರ್ಮಾನಿಸಿದ್ದರು. ಆದರೆ, ಮುಖ್ಯಮಂತ್ರಿಗಳು ರಾಜ್ಯದ ಇತರ ಕೆಲಸಗಳ ನಿಮಿತ್ತ ಮುಂದಿನ ದಿನಗಳಲ್ಲಿ ಬರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಎಂದಿನಂತೆ ಜೂ.27 ರಂದೇ ಜಿಲ್ಲಾಡಳಿತದೊಂದಿಗೆ ಸೇರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದಾಗಿ ಹೇಳಿದರು.

ಈ ವೇಳೆ ಮಾಜಿ ಶಾಸಕ ಎಲ್‌. ನಾಗೇಂದ್ರ ಮಾತನಾಡಿ, ರಾಜಕೀಯವನ್ನು ಕೇವಲ 2 ತಿಂಗಳಿಗೆ ಸೀಮಿತಗೊಳಿಸೋಣ. ಸಮುದಾಯದ ವಿಚಾರ ಬಂದಾಗ ಪಕ್ಷಾತೀತವಾಗಿ ಒಮ್ಮತದಿಂದ ಕೆಂಪೇಗೌಡ ಜಯಂತಿ ಆಚರಿಸೋಣ. ಮುಂದಿನ ಸಾರಿಯಿಂದ ಮೂರು ತಿಂಗಳು ಮುನ್ನ ಕೆಂಪೇಗೌಡ ಜಯಂತಿ ಆಚರಣೆಯ ತಯಾರಿಗಳು ನಡೆಯಬೇಕು. ಈಗ ಹೆಚ್ಚಿನ ಪ್ರಚಾರ ಕೈಗೊಂಡು ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮುದಾಯದ ಶಕ್ತಿ ತೋರುವ ಕೆಲಸ ಆಗಲಿ ಎಂದರು.


ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷ ಪಿ. ಪ್ರಶಾಂತಗೌಡ ಮಾತನಾಡಿ, ಪ್ರಚಾರ ಸಮಿತಿ, ಆಹಾರ ಸಮಿತಿ, ಪ್ರತಿಭಾ ಪುರಸ್ಕಾರ ಸಮಿತಿ, ಸ್ವಾಗತ ಸಮಿತಿ, ಹಣಕಾಸು ಸಮಿತಿ ಹೀಗೆ ಏಳಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗುತ್ತಿದೆ. ಆಸಕ್ತ ಸಮುದಾಯದ ಯಾರೂ ಬೇಕಾದರೂ ಮುಂದೆ ಬಂದು ಜಯಂತಿ ಯಶಸ್ವಿಗೆ ಕೆಲಸ ಮಾಡಬಹುದಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ನಾವು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಕೆ. ಹರೀಶ್‌ ಗೌಡ ಹಾಗೂ ಮಾಜಿ ಶಾಸಕ ಎಲ್‌. ನಾಗೇಂದ್ರ ಮಾರ್ಗದರ್ಶನದಲ್ಲಿ ಸಮಿತಿಯ ರಚನೆ ಮಾಡುವುದಾಗಿ ತಿಳಿಸಿ ಸಭೆಯ ಒಪ್ಪಿಗೆ ಪಡೆದರು.

ಜೊತೆಗೆ ಜಿಲ್ಲೆಯ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು ಸೇರಿ ಎಲ್ಲಾ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಸಂಪೂರ್ಣ ಕಾರ್ಯಕ್ರಮವನ್ನು ಸ್ವಾಮೀಜಿಯ ಸಾನ್ನಿಧ್ಯದೊಂದಿಗೆ ನಡೆಸಲಾಗುತ್ತಿದ್ದು, ಸಮುದಾಯದ ಎಲ್ಲರೂ ಸಹಕಾರ ನೀಡಿ ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಬೇಕು ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ. ಶ್ರೀಧರ್‌, ಮೈಸೂರು- ಚಾಮರಾಜನಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಮರಿಸ್ವಾಮಿ, ಗೌರವಾಧ್ಯಕ್ಷ ಆಲತೂರು ಜಯರಾಮ್, ಉಪಾಧ್ಯಕ್ಷ ರವಿಕುಮಾರ್, ಬನ್ನೂರು ಮಹೇಶ್‌, ಪ್ರಧಾನ ಕಾರ್ಯದರ್ಶಿ ಎಂ.ಈ. ಚೇತನ್, ನಿರ್ದೇಶಕರಾದ ಒಂಟಿಕೊಪ್ಪಲು ಗುರುರಾಜ್‌, ರವಿ, ಬಿ.ಪಿ. ಬೋರೇಗೌಡ, ಗಿರೀಶ್‌ ಗೌಡ, ಜಿ. ಕುಮಾರ್‌ ಗೌಡ, ಎಂ. ಸುಶೀಲಾ ನಂಜಪ್ಪ, ಉಮೇಶ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್‌ ಕುಮಾರ್‌ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ಮುಖಂಡರಾದ ಬೀಡನಹಳ್ಳಿ ಸತೀಶ್ ಗೌಡ, ರವಿಕುಮಾರ್‌, ರಾಕೇಶ್‌ ಗೌಡ, ಕೃಷ್ಣೇಗೌಡ, ಕೆ.ಜಿ. ಕೊಪ್ಪಲು ರಾಜಣ್ಣ, ಜೆ.ಪಿ. ನಗರ ಕೃಷ್ಣ, ಮರೀಗೌಡ ಮೊದಲಾದವರು ಇದ್ದರು.

ಡಿ.ಕೆ. ಶಿವಕುಮಾರ್‌ ಅವರಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಲಾಗುವುದು. ಸದ್ಯ ಕೆಂಪೇಗೌಡ ಜಯಂತಿಯನ್ನು ಪಕ್ಷಾತೀತವಾಗಿ ಯಶಸ್ವಿಯಾಗೊಳಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡಂತೆ ಕಾರ್ಯಕ್ರಮ ರೂಪಸಿ, ಅದಕ್ಕೆ ಬೇಕಾಗುವ ಸಹಕಾರವನ್ನು ನೀಡಲಾಗುವುದು. ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ನಡೆಸಲು ತಯಾರಿ ನಡೆಸಿ.

- ಕೆ. ಹರೀಶ್‌ ಗೌಡ, ಶಾಸಕರು

8 ಸಮಿತಿಗಳ ರಚನೆ

ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವ ಸಮಿತಿಗೆ ಮತ್ತೊಮ್ಮೆ ಪ್ರಶಾಂತ್‌ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆರ್‌. ರಾಕೇಶ್‌ ಗೌಡ, ನಗರಸಮಿತಿ ಚೇತನ್‌ ವಿಷಕಂಠೇಗೌಡ, ಗ್ರಾಮಾಂತರ ಸಮಿತಿ ಅಧ್ಯಕ್ಷರಾಗಿ ಹಿನಕಲ್‌ ರಾಜಕುಮಾರ್‌, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಮರೀಗೌಡ, ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾಗಿ ಪ್ರೇಮಾ ಶಂಕರೇಗೌಡ, ಸಾಧಕರ ಪುರಸ್ಕಾರ ಸಮಿತಿ ಅಧ್ಯಕ್ಷರಾಗಿ ಬಿ.ಪಿ. ಬೋರೇಗೌಡ, ಆಹಾರ ಸಮಿತಿ ಅಧ್ಯಕ್ಷರಾಗಿ ಕೆ.ಜಿ. ಕೊಪ್ಪಲು ರಾಜಣ್ಣ ಹಾಗೂ ಎಲ್ಲಾ ಸಮಿತಿಯಿಂದಲೂ 150 ಹೆಚ್ಚು ಸದಸ್ಯರನ್ನು ನೇಮಿಸಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುವಂತೆ ಕೋರಲಾಯಿತು.