ಒಳಮೀಸಲಾತಿ ಜಾರಿಗೆ ಸಮ್ಮತಿ ಸ್ವಾಗತಾರ್ಹ

| Published : Oct 29 2024, 12:47 AM IST

ಸಾರಾಂಶ

ಚಿತ್ರದುರ್ಗ: ಒಳ ಮೀಸಲಾತಿ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂಬ ಸಮುದಾಯದ ಕೂಗಿಗೆ ಸಿಎಂ ಸಿದ್ದರಾಮಯ್ಯ ಧ್ವನಿಯಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ: ಒಳ ಮೀಸಲಾತಿ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂಬ ಸಮುದಾಯದ ಕೂಗಿಗೆ ಸಿಎಂ ಸಿದ್ದರಾಮಯ್ಯ ಧ್ವನಿಯಾಗಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಸ ವ್ಯಕ್ತಪಡಿಸಿದ್ದಾರೆ.ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ಬದ್ಧ ಎಂದು ಘೋಷಿಸಿತ್ತು. ಆದರೆ, ಕಾನೂನು ತೊಡಕು ಅಡ್ಡಿಯಾಗಿತ್ತು. ಮೂರು ದಶಕಗಳ ಕಾಲ ಸಮುದಾಯದ ನಾಯಕರು, ಸಂಘಟನೆಗಳು ನಡೆಸಿದ ಹೋರಾಟದ ಫಲ ಸುಪ್ರೀಂ ಕೋರ್ಟ್ ತೀರ್ಪು ಮರುಜೀವ ನೀಡಿತ್ತು. ಅದನ್ನು ಅನುಷ್ಠಾನಗೊಳಿಸುವಲ್ಲಿ ಅಂತಿಮವಾಗಿ ರಾಜ್ಯ ಸಚಿವ ಸಂಪುಟ ಸೋಮವಾರ ಸಮ್ಮತಿ ವ್ಯಕ್ತಪಡಿಸಿದ್ದು, ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಿ, ಮೂರು ತಿಂಗಳೊಳಗೆ ದತ್ತಾಂಶದ ವರದಿ ತರಿಸಿಕೊಂಡು ಒಳಮೀಸಲಾತಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಜತೆಗೆ ಸರ್ಕಾರಿ ಉದ್ಯೋಗ ನೇಮಕಾತಿಗೆ ತಡೆ ಹಾಕಿರುವುದು ಸಮುದಾಯದಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಿಳಿಸಿದ್ದಾರೆ. ಕೆಪಿಎಸ್ಸಿ ಸೇರಿ ಎಲ್ಲ ರೀತಿಯ ನೇಮಕಾತಿಗಳ ಪ್ರಕ್ರಿಯೆಗೆ ತಡೆ ಹಾಕುವ ಜತೆಗೆ ಎಸ್ಸಿಪಿ, ಟಿಎಸ್‌ಪಿ ಹಣ ಹಂಚಿಕೆಗೂ ತಡೆ ಹಾಕುವ ನಿರ್ಧಾರ ಕೈಗೊಳ್ಳಬೇಕು. ಮುಖ್ಯವಾಗಿ ಮೂರು ತಿಂಗಳೊಳಗೆ ವರದಿ ತರಿಸಿಕೊಂಡು, 4ನೇ ತಿಂಗಳಲ್ಲಿ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ನೇಮಕಾತಿ ಆಗದ ಕಾರಣಕ್ಕೆ ವಯಸ್ಸಿನ ಮೀತಿಯನ್ನು ನಾಲ್ಕು ತಿಂಗಳು ಸಡಿಲಗೊಳಿಸಿ, ಎಲ್ಲ ವರ್ಗದ ವಿದ್ಯಾವಂತರಿಗೆ ನ್ಯಾಯ ಕಲ್ಪಿಸಬೇಕು. ಒಳ ಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ಸಹಸ್ರಾರು ಮಂದಿ, ಹತ್ತಾರು ಸಂಘಟನೆಗಳು ಹೋರಾಟ ನಡೆಸಿದ್ದು, ಅವರೆಲ್ಲರ ಆಶಯದಂತೆ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಕಲ್ಪಿಸಲು ಕ್ರಮಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದ್ದಾರೆ.