ದಕ್ಷಿಣ ಕಾಶಿ ಶಿರವಾಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಚಿವ ಪಾಟೀಲ್

| Published : Nov 09 2023, 01:00 AM IST

ಸಾರಾಂಶ

ಶಿರವಾಳ ಗ್ರಾಮದ ಐತಿಹಾಸಿಕ ದೇವಾಲಯಗಳ ವೀಕ್ಷಣೆ

ಕನ್ನಡಪ್ರಭ ವಾರ್ತೆ ಶಹಾಪುರದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶಿರವಾಳ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ಕಲೆಯಲ್ಲಿ ಶ್ರೀಮಂತಿಕೆ ಇರುವ ಗ್ರಾಮ. ಜನರಲ್ಲಿ ನಮ್ಮ ಸಂಸ್ಕೃತಿ, ಸ್ಮಾರಕಗಳ ಸಂರಕ್ಷಣೆಗೆ ಹಾಗೂ ಇತಿಹಾಸದ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಮ್ಮ ಸ್ಮಾರಕ ದರ್ಶನ ಪ್ರವಾಸ ಕೈಗೊಳ್ಳಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ತಿಳಿಸಿದರು.

ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಶಿರವಾಳದ ರಾಷ್ಟ್ರಕೂಟರ ಕಾಲದ ಐತಿಹಾಸಿಕ ದೇವಾಲಯಗಳನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು. ಶಿರವಾಳ ಗ್ರಾಮವು ಯಾವ ಪ್ರಖ್ಯಾತಿ ಪಡೆಯಬೇಕಾಗಿತ್ತೋ ಆ ಮಟ್ಟದಲ್ಲಿ ಪಡೆಯದೆ ಇರುವುದು ವಿಷಾದನೀಯ ಸಂಗತಿ. ಇಲ್ಲಿ 360 ದೇವಾಲಯಗಳು 360 ಬಾವಿಗಳು ಸಾವಿರಕ್ಕೂ ಹೆಚ್ಚು ಶಿವಲಿಂಗಗಳು ಇರುವುದನ್ನು ಕೇಳಿ ತುಂಬಾ ಆಶ್ಚರ್ಯವಾಯಿತು. ಇಷ್ಟೊಂದು ದೇವಸ್ಥಾನ ಬೇರೆ ಯಾವ ಊರಲ್ಲಿಯೂ ಕಾಣ ಸಿಗುವುದಿಲ್ಲ. ಇಂತಹ ಪ್ರಖ್ಯಾತಿ ಇರುವ ಗ್ರಾಮದ ದೇಗುಲಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಗ್ರಾಮದ ಪ್ರತಿಯೊಬ್ಬರು ಸಾಧ್ಯವಾದಷ್ಟು ಇಂತಹ ಐತಿಹಾಸಿಕ ದೇವಾಲಯಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ, ದೇವಾಲಯಕ್ಕೆ ಬರುವ ದಾರಿಯುದ್ದಕ್ಕೂ ಮುಳ್ಳು ಗಿಡಗಳನ್ನು ತೆರವುಗೊಳಿಸಿ ಐತಿಹಾಸಿಕ ಪರಂಪರೆಯುಳ್ಳ ಈ ದೇವಾಲಯ ನೋಡಲು ಅನುಕೂಲಕರವಾಗುತ್ತದೆ. ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುವುದರಿಂದ ಗ್ರಾಮದ ಅಭಿವೃದ್ಧಿ, ಗ್ರಾಮದ ಕೀರ್ತಿ, ಪ್ರಪಂಚಾದ್ಯಂತ ಪಸರಿಸಬಹುದು. ಐತಿಹಾಸಿಕ ತಾಣಗಳನ್ನು ಹಣವಂತರು, ಲಾಭದಾಯಕ ಕಂಪನಿಗಳು, ಆಸಕ್ತರು ಸೇರಿದಂತೆ ಯಾರೇ ದತ್ತು ತೆಗೆದುಕೊಂಡು ಸಂರಕ್ಷಿಸಲು ಮುಂದಾದಲ್ಲಿ ಸರ್ಕಾರ ಸಂಪೂರ್ಣ ಅವರಿಗೆ ಸಹಕಾರ ನೀಡಲಿದೆ ಎಂದರು.

ಶಿರವಾಳ ಗ್ರಾಮದ ಸುಜ್ಞಾನೇಶ್ವರ, ನಾಗಯ್ಯಾ, ನಾನಯ್ಯಾ, ಪವಿತ್ರ ಭಾವಿ, ಸಿದ್ದಲಿಂಗೇಶ್ವರ ದೇವಾಲಯಗಳನ್ನು ಸಚಿವರು ವೀಕ್ಷಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಪರಿಸರಕ್ಕೆ ವಿಶೇಷ ಆದ್ಯತೆ ನೀಡಲು ಜಿಲ್ಲಾಡಳಿತ ಹಾಗೂ ನಾವುಗಳು ಸದಾ ಸಿದ್ಧರಿದ್ದೇವೆ. ಎಂದರು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿ.ಪಂ. ಸಿಇಓ ಗರಿಮಾ ಪನ್ವಾರ, ಪ್ರೊ. ಕೊಟ್ರೆಶ್, ಪುರತತ್ವ ಇಲಾಖೆಯ ಆಯುಕ್ತ ದೇವರಾಜ, ಡಾ. ಟಿ.ಆರ್. ಪಾಟೀಲ್, ಮಾಜಿ ಶಾಸಕ ಗುರುಪಾಟೀಲ್ ಶಿರವಾಳ, ಸಂಶೋಧಕ ಡಾ. ಎಂ. ಎಸ್. ಶಿರವಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದುಕೂರ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಣ್ಣ ಸಾಹು ಮಡ್ಡಿ, ಇಬ್ರಾಹಿಂಸಾಬ್ ಶಿರವಾಳ ಇತರರಿದ್ದರು.

ಜನಮಾನಸದಿಂದ ದೂರ ಉಳಿದಿರುವ ಅದರಲ್ಲೂ ನಿರ್ಲಕ್ಷ್ಯತನಕ್ಕೆ ಒಳಪಟ್ಟಿರುವ ಸ್ಮಾರಕಗಳು ಬಹಳಷ್ಟಿವೆ. ಒಂದು ಸಾವಿರ ಸ್ಮಾರಕಗಳನ್ನು ಆದ್ಯತೆಗನುಗುಣವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವರು.