ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಕರಡೊಳ್ಳಿ ಗೋವರ್ಧನ ಗೋಶಾಲೆಯಲ್ಲಿ ಭಾರತೀಯ ತಳಿ ಗೋವು ರಕ್ಷಿಸುವ ಮಹತ್ಕಾರ್ಯ ನಡೆಯುತ್ತಿದೆ. ಈ ಗೋಶಾಲೆಯಲ್ಲಿ ಮಲೆನಾಡಿನ ಗೋ ತಳಿಗಳನ್ನೇ ಹೆಚ್ಚಾಗಿ ಸಾಕಲಾಗುತ್ತಿದೆ.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ಭಾರತೀಯ ಗೋ ಸಂತಾನ ಸಂರಕ್ಷಿಸುವ ಸಂಕಲ್ಪದಿಂದ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಆರಂಭಿಸಿರುವ ಗೋಶಾಲೆ ಈಗ 150ಕ್ಕೂ ಹೆಚ್ಚು ಗೋವುಗಳ ಆಶ್ರಯ ತಾಣವಾಗಿದೆ.

ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಕರಡೊಳ್ಳಿ ಗೋವರ್ಧನ ಗೋಶಾಲೆಯಲ್ಲಿ ಭಾರತೀಯ ತಳಿ ಗೋವು ರಕ್ಷಿಸುವ ಮಹತ್ಕಾರ್ಯ ನಡೆಯುತ್ತಿದೆ. ಈ ಗೋಶಾಲೆಯಲ್ಲಿ ಮಲೆನಾಡಿನ ಗೋ ತಳಿಗಳನ್ನೇ ಹೆಚ್ಚಾಗಿ ಸಾಕಲಾಗುತ್ತಿದೆ.

ನಿರಂತರ ಗೋವಧೆಯಾಗುತ್ತಿದೆ. ಗೋ ಪಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲಲ್ಲಿ ಹೆಚ್ಚಿನ ಹಾಲು ಪಡೆದು ವ್ಯವಹಾರದ ಉದ್ದೇಶಕ್ಕೆ ವಿದೇಶಿ ತಳಿಗಳನ್ನೇ ಸಾಕಲಾಗುತ್ತಿದೆ. ಇದು ಅಷ್ಟು ಆರೋಗ್ಯಕ್ಕೆ ಅಪಥ್ಯ. ನಮ್ಮ ಬದುಕನ್ನು ಆಧುನಿಕತೆಯತ್ತ ಮುನ್ನಡೆಸುತ್ತ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮ ಪರಂಪರೆಯ ಮೌಲ್ಯವನ್ನು ನಿರ್ಲಕ್ಷಿಸಿ ಸಾಕಷ್ಟು ದೂರ ಸಾಗಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಯುವಜನರೇ ಕೆಲವು ವರ್ಷಗಳಲ್ಲಿ ಇಲ್ಲದಂತಾಗಿ, ವೃದ್ಧಾಶ್ರಮಗಳೇ ನಿರ್ಮಾಣಗೊಂಡು, ಜಿಲ್ಲೆಯ ಭವಿಷ್ಯ ಮುಂದೇನಾದೀತು ಎಂಬ ಆತಂಕದ ನಡುವೆ ನಾವಿದ್ದೇವೆ. ಇಂತಹ ಸ್ಥಿತಿಯಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಈ ಗೋಶಾಲೆಯಲ್ಲಿ ಭಾರತೀಯ ಗೋತಳಿ ಸಂರಕ್ಷಣೆಗೆ ಶ್ರಮಿಸಲಾಗುತ್ತಿದೆ.

ಸಾಕಲಾಗದವರು ತಮ್ಮ ಗೋವುಗಳನ್ನು ಇಲ್ಲಿ ತಂದು ಬಿಡಬಹುದು. ಸಾಕುವವರೂ ಇಲ್ಲಿನ ಗೋವುಗಳನ್ನು ಪಡೆಯಬಹುದು. ಇದಕ್ಕೆ ಗೋಶಾಲೆಯ ಕೆಲವು ನಿಬಂಧನೆಗೊಳಪಟ್ಟು ಗೋವು ನೀಡಲಾಗುತ್ತದೆ. ಕರಡೊಳ್ಳಿಯಲ್ಲಿ ೧೨ ವರ್ಷಗಳ ಹಿಂದೆ ೧೧ ಎಕರೆ ಪ್ರದೇಶವನ್ನು ಗೋಶಾಲೆಗಾಗಿ ಶ್ರೀಮಠ ಖರೀದಿಸಿ ಗೋಶಾಲೆ ಪ್ರಾರಂಭಿಸಲಾಯಿತು. ಗೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಅವುಗಳಿಗೆ ವ್ಯವಸ್ಥೆ ಮಾಡುವುದು ಕಷ್ಟವಾದರೂ ಗೋಶಾಲೆ ಸೇವಾ ಸಮಿತಿ ಸಾಕಷ್ಟು ಶ್ರಮಿಸುತ್ತಿದೆ.

ಹೊಸ ಗೋಶಾಲೆ:

ಪ್ರಸ್ತುತ ₹೨ ಕೋಟಿ ವೆಚ್ಚದಲ್ಲಿ, ಸುಮಾರು ೫೦೦ಕ್ಕೂ ಹೆಚ್ಚು ಗೋವುಗಳ ವಾಸ್ತವ್ಯಕ್ಕೆ ಭವ್ಯವಾದ "ಸ್ವರ್ಣನಂದಿನಿ ಗೋಸಂಸ್ಥಾನ " ಹೆಸರಿನ ಹೊಸ ಗೋಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಚಂದ್ರಶಾಲೆಯ ಆಕಾರದಲ್ಲಿ ಭವ್ಯವಾಗಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಮಧ್ಯದಲ್ಲಿ ಗೋಪೂಜೆಗಾಗಿ ಗೋಮಂಟಪವನ್ನು ಸುಂದರ ಗುಡಿಯಂತೆ ನಿರ್ಮಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕಾರ್ಯ ಪ್ರಗತಿಯಲ್ಲಿ ಇದ್ದರೂ ಹಣದ ಕೊರತೆಯಿದೆ. ಭಕ್ತರು, ದಾನಿಗಳು ಹಣ ನೀಡುತ್ತಿದ್ದಾರೆ. ದಾನಿಗಳಿಗೆ ಸದಾ ಅವಕಾಶವಿದೆ.

ಈ ೧೧ ಎಕರೆ ಪ್ರದೇಶದಲ್ಲಿ ಅಡಕೆ, ಕಬ್ಬು, ಭತ್ತ, ಹುಲ್ಲು ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈಗಿರುವ ಗೋವುಗಳಿಗಾಗಿ ಪ್ರತಿ ತಿಂಗಳಿಗೆ ₹1.25 ಲಕ್ಷ ವೆಚ್ಚದ ಹುಲ್ಲು ಖರೀದಿಸಲಾಗುತ್ತಿದೆ. ಇಲ್ಲಿ ಬೆಳೆಯುತ್ತಿರುವ ಕಬ್ಬಿನಿಂದ ಬೆಲ್ಲ, ಗೋವುಗಳ ಗೊಬ್ಬರ, ಗೋಮೂತ್ರ ಸೇರಿದಂತೆ ಹಲವು ಉತ್ಪನ್ನಗಳ ವಿನಿಮಯ ಕೂಡ ಮಾಡಲಾಗುತ್ತಿದೆ. ವಿಶೇಷವಾಗಿ ಪುಂಗನೂರು, ಗೀರ್, ಮಲೆನಾಡು ಗಿಡ್ಡ, ಸಿಂಧೀ, ಕಿಲಾರಿ, ಕೃಷ್ಣವ್ಯಾಲಿ, ಥಾರ್ಪಾರ್ಕರ್, ಕಂಗಾಯ, ಸಾಹಿವಾಲ್, ಕಾಂಕ್ರೆಜ್, ಸ್ವರ್ಣಕಪಿಲಾ ಹೀಗೆ ದೇಶೀಯ ಹತ್ತಾರು ತಳಿಗಳನ್ನು ಈ ಗೋಶಾಲೆಯಲ್ಲಿ ಕಾಣಬಹುದು.

ಸ್ಥಳೀಯರಾದ ರಾಮಕೃಷ್ಣ ಭಟ್ಟ ಕವಾಳೆ ಕಾರ್ಯಾಧ್ಯಕ್ಷರಾಗಿ, ಗಣಪತಿ ಭಟ್ಟ ಕೋಲೀಬೇಣ ಪ್ರಧಾನ ಕಾರ್ಯದರ್ಶಿಯಾಗಿ ೧೫ ಜನರ ಅತ್ಯಂತ ಕ್ರಿಯಾಶೀಲ ತಂಡದ ಸಮಿತಿ ಈ ಗೋಶಾಲೆಯ ನೂತನ ಕಟ್ಟಡ ನಿರ್ಮಾಣ ಹಾಗೂ ಸದಾ ಗೋವುಗಳ ಪಾಲನೆಯ ವ್ಯವಸ್ಥೆಯ ನೇತೃತ್ವ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ.