ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ
ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಪರಿಸರ ರಕ್ಷಕರಾಗಿ ಸೇವೆ ಸಲ್ಲಿಸಿದ, ಗದಗ ಜಿಲ್ಲಾ ಪ್ರಭಾರಿ ಎಸಿಎಫ್ ಮತ್ತು ಗದಗ ಜಿಲ್ಲಾ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೀರೇಂದ್ರ ಮರಿಬಸಣ್ಣನವರ ಅವರು ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣೆ ವಿಭಾಗದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.2014ರಲ್ಲಿ ಔರಾದ್ ಭಾಗದ ಅರಣ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ವೀರೇಂದ್ರ ಮರಿಬಸಣ್ಣನವರ, 2017ರಲ್ಲಿ ಮಡಿಕೇರಿಯಲ್ಲಿ 5 ವರ್ಷ ಅಭೂತಪೂರ್ವ ಸೇವೆ ಸಲ್ಲಿಸಿದರು. ಬಳಿಕ 2022ರಲ್ಲಿ ಮುಂಡರಗಿಗೆ ವರ್ಗಾವಣೆಗೊಂಡರು. ತಾಲೂಕಿನ ಸಸ್ಯಕಾಶಿ ಕಪ್ಪತ್ತಗುಡ್ಡವಲಯದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸುವ ಮೂಲಕ ಗಮನ ಸೆಳೆದರು. ಗದಗ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಪ್ರೇರಣೆಯೂ ಆಗಿದ್ದಾರೆ.
ಕಪ್ಪತ್ತಗುಡ್ಡ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ಹಸಿರು ಹೆಚ್ಚಿಸಲು ಅವರ ಪರಿಶ್ರಮ ದೊಡ್ಡದು. ಜತೆಗೆ ಜಿಲ್ಲೆಯ ಇನ್ನುಳಿದ ಭಾಗಗಳಲ್ಲಿಯೂ ಸಸಿಗಳನ್ನು ಬೆಳೆಸಲು ವಿಶೇಷ ಕಾಳಜಿ ವಹಿಸಿದರು. ಸತತ ಎರಡು ವರ್ಷ ಕಕ್ಕುರ ನರ್ಸರಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ಕಪ್ಪತ್ತಗುಡ್ಡ, ಸರ್ಕಾರಿ ಸ್ಥಳ, ರಸ್ತೆಗಳಲ್ಲಿ, ರೈತರ ಜಮೀನುಗಳಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದರು. ಇಲ್ಲಿರುವ ಪ್ರಾಣಿಗಳ ರಕ್ಷಣೆಗೆ ಸಿಬ್ಬಂದಿ ಜತೆ ನಿರಂತರ ಶ್ರಮಿಸುತ್ತಿದ್ದಾರೆ. ಜತೆಗೆ ಕಪ್ಪತ್ತಗುಡ್ಡ ಭಾಗದಲ್ಲಿ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ. ಅವರ ಕ್ರಮ ಪರಿಸರವಾದಿಗಳ ಪ್ರಶಂಸೆಗೆ ಕಾರಣವಾಗಿದೆ.ಔರಾದ ಬೋರಾಳ ಸಸ್ಯಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಪೋಷಣೆ ಮಾಡಿದ್ದಾರೆ. ಅರಣ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ ಶ್ರೇಯಸ್ಸು ಇವರದ್ದಾಗಿದೆ.
ಮಡಿಕೇರಿ ಅರಣ್ಯ: ಈ ಭಾಗದಲ್ಲಿ 5 ವರ್ಷಗಳ ಕಾಲ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಆನೆ, ಹುಲಿ, ಚಿರತೆ, ಹೀಗೆ ಹಲವು ಪ್ರಾಣಿಗಳ ರಕ್ಷಕರಾಗಿ ಹೆಸರು ಗಳಿಸಿದರು. ರೈತರ ಜಮೀನುಗಳಿಗೆ ಆನೆಗಳ ದಾಳಿ ತಡೆಯುವ ಜತೆಗೆ ವನ್ಯಜೀವಿ ಸಂರಕ್ಷಣೆಗೂ ವಿಶೇಷ ಕಾಳಜಿ ವಹಿಸಿದರು. ಇದರಿಂದ ಅರಣ್ಯ ಭಾಗದಲ್ಲಿ ನೆಲೆಸಿದ್ದ ಗ್ರಾಮಗಳ ಜನರು ಮತ್ತು ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸಿದರು.ಅರಣ್ಯ ಸಂರಕ್ಷಣೆ, ಅಕ್ರಮ ತಡೆಗಟ್ಟುವಿಕೆ, ವನ್ಯಜೀವಿ ಸಂರಕ್ಷಣೆ, ಸಂಶೋಧನೆ, ಅರಣ್ಯ ಪ್ರದೇಶ ಒತ್ತುವರಿದಾರರಿಂದ ತೆರವುಗೊಳಿಸುವುದು, ನೆಡತೋಪು ಬೆಳೆಸುವಂತಹ ಅಭಿವೃದ್ಧಿ ಕಾರ್ಯಗಳು, ಮಾನವ ಪ್ರಾಣಿ ಸಂಘರ್ಷ ಹಾಗೂ ಇತರ ನವೀನ ಆಲೋಚನೆಗಳನ್ನು ಉಪಯೋಗಿಸಿರುವ ವೀರೇಂದ್ರ ಮರಿಬಸಣ್ಣನವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಸನ್ಮಾನಿಸಿದ್ದಾರೆ.
ಸೋಮಶೇಖರ-ಲಕ್ಷ್ಮಿ ಅವರು ವೀರೇಂದ್ರ ಮರಿಬಣ್ಣನವರ ಅವರ ತಂದೆ-ತಾಯಿಗಳು. ಹುಲಕೋಟಿಯಲ್ಲಿ ಪ್ರಾಥಮಿಕ, ಪ್ರೌಢ, ಮಾಧ್ಯಮಿಕ ಶಿಕ್ಷಣ ಪಡೆದು, ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ, ಆನಂತರ ಎಂಎಸ್‍ಸಿಯಲ್ಲಿ ಅರಣ್ಯ ಪದವಿ ಪಡೆದರು. ಚೈತನ್ಯ ಅವರನ್ನು ಕೈ ಹಿಡಿದರು.ಪರಿಸರ, ವನ್ಯಪ್ರಾಣಿಗಳ ರಕ್ಷಕರಾದ ಅರಣ್ಯ ಕಾಯುವ ಎಲ್ಲ ಹಂತದ ಸಿಬ್ಬಂದಿ ಮತ್ತು ಪರಿಸರವಾದಿಗಳ ಶ್ರಮದಿಂದ ಶುದ್ಧ ಆಮ್ಲಜನಕ ಪಡೆಯಲು, ಸಾಕಷ್ಟು ಮಳೆ ಬೀಳಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಗದಗ ಜಿಲ್ಲಾ ಪ್ರಭಾರಿ ಎಸಿಎಫ್ ವೀರೇಂದ್ರ ಮರಿಬಸಣ್ಣನವರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪದಕ ಪಡೆದು ಸಾಧನೆ ಮಾಡಿರುವ ವೀರೇಂದ್ರ ಮರಿಬಸಣ್ಣನವರ ಅವರ ಪರಿಸರ, ವನ್ಯಪ್ರಾಣಿಗಳ ಸೇವಾ ಕಾರ್ಯ ಪ್ರಶಂಸನೀಯವಾದದ್ದು ಎಂದು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.