ಆಟೋ ಚಾಲಕರು ತಮ್ಮ ವೃತ್ತಿಯನ್ನು ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡುವ ಸೇವೆ ಎಂದು ಪರಿಗಣಿಸಬೇಕು. ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು
ತುಮಕೂರು: ಆಟೋ ಚಾಲಕರು ತಮ್ಮ ವೃತ್ತಿಯನ್ನು ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡುವ ಸೇವೆ ಎಂದು ಪರಿಗಣಿಸಬೇಕು. ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು. ಕಾನೂನನ್ನು ಗೌರವಿಸಿ ಪಾಲಿಸುವವರನ್ನು ಪೊಲೀಸರೂ ಗೌರವಿಸುತ್ತಾರೆ ಎಂದು ನಗರ ವೃತ್ತದ ಸರ್ಕಲ್ ಇನ್ಸಪೆಕ್ಟರ್ ಅವಿನಾಶ್ ಹೇಳಿದರು.
ನಗರದ ಪ್ರಶಾಂತ ಟಾಕಿಸ್ ಬಳಿಯ ಜೈ ಭೀಮ್ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಹಾಗೂ ಪ್ರಜಾ ಪರಿವರ್ತನಾ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸರ್ಕಾರ ನಮಗೆ ಖಾಕಿ ಸಮವಸ್ತ್ರ ನೀಡಿದೆ. ನಿಮಗೂ ಖಾಕಿ ಸಮವಸ್ತ್ರ ಧರಿಸಲು ತಿಳಿಸಿದೆ. ಸಮವಸ್ತ್ರ ಶಿಸ್ತು, ಸೇವೆಯ ಸಂಕೇತ. ಆಟೋ ಏರುವ ಮೊದಲು ಸಮವಸ್ತ್ರ ಧರಿಸಿ, ಸಂಬಂಧಿಸಿದ ಚಾಲನಾ ದಾಖಲಾತಿಗಳನ್ನು ಇಟ್ಟುಕೊಳ್ಳುವುದನ್ನು ಮರೆಯಬಾರದು ಎಂದರು.
ನಿಮ್ಮನ್ನು ನಂಬಿ ಬರುವ ಪ್ರಯಾಣಿಕರ ರಕ್ಷಣೆ ನಿಮ್ಮ ಜವಾಬ್ದಾರಿ. ಸೇವೆಯ ರೂಪದಲ್ಲಿ ಸುರಕ್ಷಿತವಾಗಿ ಅವರ ಸ್ಥಳಕ್ಕೆ ತಲುಪಿಸಿ ಸರ್ಕಾರ ನಿಗದಿ ಮಾಡಿರುವ ದರ ಪಡೆಯಿರಿ. ಪ್ರಯಾಣಿಕರ ಶೋಷಣೆ. ನಿಂದನೆ ಮಾಡಿದರೆ ಪೊಲೀಸರಾದ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಅಧ್ಯಕ್ಷ ಹಾಗೂ ಜಿಲ್ಲಾ ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರತಾಪ್ ಮದಕರಿ, ಸಂಘದ ಮುಖಂಡರಾದ ಟಿ.ಎ.ವೆಂಕಟೇಶ್, ಸೋಮಣ್ಣ, ಲಕ್ಷ್ಮಿಕಾಂತಸ್ವಾಮಿ, ಕಾಂತರಾಜು, ನರಸಿಂಹ, ಮಂಜುನಾಥ್ ಹಾಗೂ ಹಲವು ಆಟೋ ಚಾಲಕರು ಭಾಗವಹಿಸಿದ್ದರು.