ಪ್ರಾಧಿಕಾರ, ನಿಗಮಮಂಡಳಿಗೆ ದಲಿತರನ್ನು ಪರಿಗಣಿಸಿ

| Published : Jan 24 2024, 02:04 AM IST

ಸಾರಾಂಶ

ಚನ್ನಪಟ್ಟಣ: ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯಮಟ್ಟದ ನಿಗಮ ಮಂಡಳಿಯ ಎರಡು ನಿರ್ದೇಶಕ ಸ್ಥಾನಗಳನ್ನು ತಾಲೂಕಿನ ದಲಿತ ಸಮುದಾಯದವರಿಗೆ ಕಲ್ಪಿಸುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬೇಕು ಎಂದು ತಾಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ಆಗ್ರಹಿಸಿದರು.

ಚನ್ನಪಟ್ಟಣ: ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯಮಟ್ಟದ ನಿಗಮ ಮಂಡಳಿಯ ಎರಡು ನಿರ್ದೇಶಕ ಸ್ಥಾನಗಳನ್ನು ತಾಲೂಕಿನ ದಲಿತ ಸಮುದಾಯದವರಿಗೆ ಕಲ್ಪಿಸುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಬೇಕು ಎಂದು ತಾಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆತ್ತಿದ್ದರೆ ಕಾಂಗ್ರೆಸ್‌ನವರು ನಮ್ಮದು ದಲಿತಪರ, ಅಲ್ಪಸಂಖ್ಯಾತರ ಪರ ಸರ್ಕಾರ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಈಗ ಅವರದೇ ಸರ್ಕಾರವಿದ್ದು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಹಾಗೂ ನಿಗಮಮಂಡಳಿಗಳಲ್ಲಿ ತಾಲೂಕಿನ ದಲಿತ ಸಮುದಾಯಕ್ಕೆ ಅವಕಾಶ ನೀಡಿ ತಮ್ಮ ದಲಿತ ಪರ ಕಾಳಜಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಧ್ವನಿ ಇಲ್ಲದ ಸಮುದಾಯ:

ನಮ್ಮದು ಧ್ವನಿಯಿಲ್ಲದ ಸಮುದಾಯವಾಗಿದ್ದು, ಎಲ್ಲ ಹಂತಗಳಲ್ಲೂ ದಲಿತರಿಗೆ ಅನ್ಯಾಯವಾಗುತ್ತಿದೆ. ದಲಿತ ಸಮುದಾಯ ತಾಲೂಕಿನಲ್ಲಿ ಹಿಂದುಳಿದಿದ್ದು, ಸರಿಯಾದ ಅಧಿಕಾರ ಕಲ್ಪಿಸುವ ಕೆಲಸವಾಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಇಬ್ಬರು ಜಿಲ್ಲೆಯವರೇ ಆಗಿದ್ದು, ಸಾಕಷ್ಟು ಪ್ರಭಾವಿಗಳಾಗಿದ್ದಾರೆ. ಈಗಲಾದರೂ ಅವರು ತಾಲೂಕಿನ ದಲಿತ ಸಮುದಾಯದವರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಖಾಲಿ ಇದೆ. ಇದುವರೆಗೂ ಪ್ರಾಧಿಕಾರಕ್ಕೆ ದಲಿತರು ಅಧ್ಯಕ್ಷರಾಗಿಲ್ಲ. ಸಾಮಾಜಿಕ ನ್ಯಾಯದ ಪರ ಮಾತನಾಡುವ ಕಾಂಗ್ರೆಸ್ ಈ ಸ್ಥಾನಕ್ಕೆ ದಲಿತ ಸಮುದಾಯದವರನ್ನು ಪರಿಗಣಿಸಬೇಕು. ನಿಮ್ಮದೇ ಪಕ್ಷದ ದಲಿತರಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಪ್ರದರ್ಶಿಸಿ ಎಂದು ಒತ್ತಾಯಿಸಿದರು.

ಜಾತಿಗಣತಿ ವಿರೋಧಕ್ಕೆ ಡಿಸಿಎಂ ಸಹಿ:ಜಾತಿಗಣತಿ ವರದಿ ಬಿಡುಗಡೆ ಬೇಡ ಎಂದು ರಾಜ್ಯ ಒಕ್ಕಲಿಗರ ಸಂಘದ ಆಗ್ರಹಿಸಿದ ಪತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿ ಹಾಕಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದು, ರಾಜ್ಯದ ಎಲ್ಲ ಜಾತಿಯ ಜನರ ಹಿತಕಾಯಬೇಕಾದವರು ಇದಕ್ಕೆ ಸಹಿಹಾಕಿದ್ದು, ಸರಿಯಲ್ಲ. ನೀವು ಸಾಮಾನ್ಯರಾಗಿ ಪತ್ರಕ್ಕೆ ಸಹಿ ಹಾಕಿದರೆ ನಮ್ಮ ವಿರೋಧವಿರಲಿಲ್ಲ, ಆದರೆ ಉಪಮುಖ್ಯಮಂತ್ರಿಯಾಗಿ ಆ ಪತ್ರಕ್ಕೆ ಸಹಿ ಹಾಕಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಅವಕಾಶ ನೀಡಿ: ಸಂಸದ ಡಿ.ಕೆ.ಸುರೇಶ್ ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಗೆ ದಲಿತ ಸಮುದಾಯ ಸಾಕಷ್ಟು ಬೆಂಬಲ ನೀಡಿದ್ದು, ಮೂರು ಬಾರಿಯೂ ಅತೀ ಹೆಚ್ಚಿನ ರೀತಿಯಲ್ಲಿ ಅವರನ್ನು ಬೆಂಬಲಿಸಿದೆ. ಈಗಲಾದರೂ ದಲಿತರಿಗೆ ಅವಕಾಶ ಕಲ್ಪಿಸುವ ಮೂಲಕ ನಮ್ಮ ಸಮುದಾಯಕ್ಕೆ ಋಣ ತೀರಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.

ದಲಿತ ಸಮುದಾಯಕ್ಕೆ ಅಧಿಕಾರ ಕಲ್ಪಿಸುವ ಕೆಲಸ ಮಾಡಿದ್ದೇ ಆದಲ್ಲಿ, ಸಮುದಾಯದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮನ್ನು ಬೆಂಬಲಿಸುವ ಸಾಧ್ಯತೆ ಇದೆ. ದಲಿತರು, ಮುಸ್ಲೀಮರು ಕಾಂಗ್ರೆಸ್ ಪರ ಇದ್ದಾರೆ ಎಂಬ ಭ್ರಮೆ ಬೇಡ. ಮತಯಂತ್ರದಲ್ಲಿ ನೋಟಾ ಅವಕಾಶ ಸಹ ಇದೆ ಎಂಬುದನ್ನು ಮರೆಯಬೇಡಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಬಿ.ವಿ.ಎಸ್. ಕುಮಾರ್, ಅಪ್ಪಗೆರೆ ಶ್ರೀನಿವಾಸ್, ಮಲ್ಲುಂಗೆರೆ ಮಹದೇವ, ಮೈಲನಾಯಕನಹಳ್ಳಿ ಕೃಷ್ಣಯ್ಯ ಎ.ಸಿ. ಜಗದೀಶ್, ಶ್ರೀನಿವಾಸ್ ಮತ್ತೀಕೆರೆ, ಶಿವಕುಮಾರ್, ಪುರುಷೋತ್ತಮ್ ಇತರರಿದ್ದರು.ಪೊಟೋ೨೩ಸಿಪಿಟಿ೨: ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.