ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ಚಿಂತಿಸಿ

| Published : Jun 13 2024, 12:50 AM IST

ಸಾರಾಂಶ

ಕೇಂದ್ರ ಸರ್ಕಾರ ಬರ, ಮಳೆಹಾನಿ, ಅತಿವೃಷ್ಟಿ ಹಾನಿ, ಮಳೆ ವಿಪತ್ತು ನಷ್ಟ ಪರಿಹಾರ, ಎನ್ ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು.

ಹುಬ್ಬಳ್ಳಿ:

ರೈತರು ಬೆಳೆದ ಆಹಾರ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರದ ಅನುದಾನವನ್ನು ಕೇಂದ್ರದ ನೂತನ ಆಹಾರ ಸಚಿವ ಪ್ರಹ್ಲಾದ ಜೋಶಿ ಹೆಚ್ಚಳ ಮಾಡಲಿ. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸುವ ಮೂಲಕ ರಾಜ್ಯಕ್ಕೆ ಆಗುವ ಅನ್ಯಾಯ ತಪ್ಪಿಸಲಿ ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಬೆಳೆದ ಆಹಾರಧಾನ್ಯಗಳ ಎಂಎಸ್‌ಪಿ ಖರೀದಿ ಅನುದಾನ ರಾಜ್ಯಕ್ಕೆ ನೀಡುವ ಪ್ರಮಾಣ ಏರಿಕೆ ಮಾಡಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳನ್ನು ರೈತರಿಂದ ಶೇ. 45ರಷ್ಟು ಖರೀದಿ ಮಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಶೇ. 3ರಷ್ಟು ಎಂಎಸ್‌ಪಿ ಕೇಂದ್ರಗಳ ಮೂಲಕ ಖರೀದಿ ಮಾಡುತ್ತಾರೆ. ಕೇಂದ್ರ ಸರ್ಕಾರ ಖರೀದಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಇದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಗಮನಿಸಿ ಪ್ರಹ್ಲಾದ ಜೋಶಿ ಅವರು ರಾಜ್ಯದ ರೈತರ ಹಿತ ರಕ್ಷಿಸಬೇಕು ಎಂದರು.

ಕಬ್ಬು ಹಾಗೂ ಸಕ್ಕರೆ ಉದ್ಯಮವನ್ನು ಡಿಜಿಟಲೀಕರಣ ಮಾಡಿ ಆ್ಯಪ್ ಮೂಲಕ ವಹಿವಾಟು ನಡೆಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿ. ₹25000 ಕೋಟಿ ವಹಿವಾಟು ನಡೆಸುವ ಸಕ್ಕರೆ ಉದ್ದಿಮೆ ಡಿಜಿಟಲೀಕರಣ ಮಾಡಿ ಕಬ್ಬು ಬೆಳೆಗಾರರ ಜತೆ ದ್ವಿಪಕ್ಷೀಯ ಒಪ್ಪಂದ, ಕಬ್ಬಿನ ತೂಕ ಸಂದೇಶ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ ಸಂದೇಶ ನೀಡುವ ಆ್ಯಪನ್ನು ಈಗಾಗಲೇ ಸಿದ್ಧಗೊಳಿಸಲಾಗಿದ್ದರೂ. ರಾಜ್ಯ ಸರ್ಕಾರ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಕಳೆದ 8 ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ₹ 700 ಕೋಟಿ ಕಬ್ಬಿನ ಹಣವನ್ನು ರೈತರಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾರ್ಖಾನೆಗಳನ್ನು ಮುಟ್ಟುಗೂಲು ಹಾಕಿಕೊಂಡು ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕುರಬೂರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಬರ, ಮಳೆಹಾನಿ, ಅತಿವೃಷ್ಟಿ ಹಾನಿ, ಮಳೆ ವಿಪತ್ತು ನಷ್ಟ ಪರಿಹಾರ, ಎನ್ ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು. ಇಲ್ಲದಿದ್ದರೆ ಬರ, ಅತಿವೃಷ್ಟಿ ಹಾನಿಗೆ ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು. ಎಲ್ಲ ರೀತಿಯ ಬೆಳೆಗಳಿಗೂ ಅನ್ವಯವಾಗುವಂತಹ ಪರಿಹಾರ ನೀಡುವ ನೀತಿ ಜಾರಿಗೆ ತರಬೇಕು. ಈ ಬಗ್ಗೆ ರಾಜ್ಯದ ನೂತನ ಸಂಸದರು ಒತ್ತಾಯಿಸಬೇಕು ಎಂದರು.

ಕಳಪೆ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ. ಬೆಳೆ ವಿಮೆ ಪದ್ಧತಿ ಬದಲಾಯಿಸಿ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿ ಮಾಡಬೇಕು. ಪ್ರತಿ ಹೊಲದ ರೈತನ ಬೆಳೆ ವಿಮೆ ನಷ್ಟ ಪರಿಹಾರ ನೀಡುವಂತಾಗಬೇಕು ಎಂದರು.

ಈ ವೇಳೆ ಜಿಲ್ಲಾಧ್ಯಕ್ಷ ಮಹೇಶ ಬೆಳಗಾವ್ಕರ, ಜಿಲ್ಲಾ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ನಿಜಗುಣ ಕೆಲಗೇರಿ, ವಾಸು ಡಾಕಪ್ಪನವರ ಸೇರಿದಂತೆ ಹಲವರಿದ್ದರು.