ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಜೀವ ವಿಮಾ ಪ್ರತಿನಿಧಿಗಳನ್ನು ಅಸಂಘಟಿತ ವಲಯ ಕಾರ್ಮಿಕರೆಂದು ಪರಿಗಣಿಸುವ ಮೂಲಕ ಕೇರಳ ರಾಜ್ಯದ ಮಾದರಿಯಲ್ಲಿಯೇ ಪಿಂಚಣಿ ಮತ್ತು ಸಾಮಾಜಿಕ ಸೌಲಭ್ಯ ಒದಗಿಸಬೇಕು ಎಂದು ದಕ್ಷಿಣ ವಲಯದ ವಿಮಾ ಪ್ರತಿನಿಧಿಗಳ ಸಂಘದ ವಲಯ ಅಧ್ಯಕ್ಷ ಎಲ್.ಮಂಜುನಾಥ್ ರಾಜ್ಯ ಸರ್ಕಾರವನ್ನು ಆಗ್ರಪಡಿಸಿದರು.ಪಟ್ಟಣದ ಬಿಂದಾಸ್ ಸಭಾಂಗಣದಲ್ಲಿ ಬುಧವಾರ ವಿಮಾ ಪ್ರತಿನಿಧಿಗಳ ಮದ್ದೂರು ಸಮಿತಿಯಿಂದ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇರಳ ಸರ್ಕಾರ ಈಗಾಗಲೇ ಜೀವ ವಿಮಾ ಪ್ರತಿನಿಧಿಗಳನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಿ ಪಿಂಚಣಿ ಸೌಲಭ್ಯ ನೀಡುತ್ತಿದೆ ಎಂದರು.
ಸಾಮಾಜಿಕ ಸೌಲಭ್ಯವಾಗಿ ಗುಂಪು ವಿಮೆ. ಪ್ರತಿನಿಧಿಗಳ ಹಾಗೂ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯ ವಿಸ್ತರಣೆ ಮಾಡುವುದರ ಜೊತೆಗೆ ಪ್ರತಿನಿಧಿಗಳಿಗೆ ಇನ್ನೂ ಹಲವು ಸೌಲಭ್ಯಗಳು ನೀಡಲು ಆ ಸರ್ಕಾರ ಮಾನಸಿಕವಾಗಿ ಸಿದ್ಧತೆ ನಡೆಸಿದೆ ಎಂದರು.ಇದೇ ಮಾದರಿಯಲ್ಲಿ ವಿಮಾ ಪ್ರತಿನಿಧಿಗಳನ್ನು ಸಂಘಟಿತ ಕಾರ್ಮಿಕರಂದು ಗುರುತಿಸಿ ಸಾಮಾಜಿಕ ಸೌಲಭ್ಯ ನೀಡುವ ಬಗ್ಗೆ ಸಂಘದ ಪ್ರತಿನಿಧಿಗಳು ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ವಿಮಾ ಪ್ರತಿನಿಧಿಗಳ ಬೇಡಿಕೆ ಕುರಿತಂತೆ ಸಚಿವ ಸಂತೋಷ್ ಲಾಡ್ ಸಹ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅವರು ಇಲಾಖೆ ಆಯುಕ್ತರೊಂದಿಗೆ ಮಾತಿಕತೆ ನಡೆಸಿ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯುವಂತೆ ಸೂಚನೆ ನೀಡಿದ್ದಾರೆ ಎಂದರು.
ಸರ್ಕಾರ ಆದಾಯ ಮಿತಿಗೆ ಒಳಪಟ್ಟ ವಿಮಾ ಪ್ರತಿನಿಧಿಗಳನ್ನು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಬೇಡಿಕೆಯನ್ನು ಸಹ ಸರ್ಕಾರದ ಮುಂದೆ ಮಂಡಿಸಲಾಗಿದೆ ಎಂದರು.ಮದ್ದೂರು ಸಮಿತಿ ಅಧ್ಯಕ್ಷ ಆನೆ ದೊಡ್ಡಿ ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಎಲ್ಐಸಿ ಮದ್ದೂರು ಶಾಖೆ ಮುಖ್ಯ ಪ್ರಬಂಧಕ ಕೆ ರಾಜನ್, ಶಾಖಾಧಿಕಾರಿ ಸುಧಾಕರ್ ರೆಡ್ಡಿ. ವಿಮಾ ಪ್ರತಿನಿಧಿಗಳ ರಾಜ್ಯ ಸಮಿತಿ ಖಜಾಂಚಿ ಸಿ ಪ್ರದೀಪ. ಮೈಸೂರು ವಿಭಾಗದ ಅಧ್ಯಕ್ಷ ಟಿ.ಎಸ್.ಸಿದ್ದಲಿಂಗ ಒಡೆಯರ್, ಉಪ ಶಾಖಾಧಿಕಾಗಳಾದ ಸೋಮಶೇಖರ್, ಟಿ.ರುದ್ರಣ್ಣ, ಅಭಿವೃದ್ಧಿ ಅಧಿಕಾರಿ ಎಸ್.ರಾಜು, ಅರುಣ್ ಕುಮಾರ್, ಸಮಿತಿ ಗೌರವಾಧ್ಯಕ್ಷ ಮುತ್ತುರಾಜು, ಪ್ರಧಾನ ಕಾರ್ಯದರ್ಶಿ ಚಾಕನಕೆರೆ ನಾಗರಾಜು, ಮಹಿಳಾ ವಲಯ ಸಂಚಾಲಕಿ ವಿಶಾಲಾಕ್ಷಿ, ಕೆಂಪರಾಜು, ಚಂದ್ರಶೇಖರ್, ಚಿಕ್ಕ ದೇವೇಗೌಡ, ಧನಪಾಲ ಶೆಟ್ಟಿ, ಶಿವಣ್ಣ, ಸಿ.ಎಸ್.ವಾಸು, ಕೃಷ್ಣೇಗೌಡ, ಬಸವಲಿಂಗೇಗೌಡ ಮತ್ತಿತರರು ಇದ್ದರು.
24ಕ್ಕೆ ಸಂಸದರ ಕಚೇರಿ, ನಿವಾಸಗಳ ಎದುರು ಪ್ರತಿಭಟನೆವಿಮಾ ಪ್ರತಿನಿಧಿಗಳ ಬೇಡಿಕೆ ಕುರಿತಂತೆ ಕೇಂದ್ರದ ಗಮನ ಸೆಳೆಯುವಂತೆ ಒತ್ತಾಯಿಸಿ ಜ.24ರಂದು ರಾಜ್ಯದ ಎಲ್ಲ ಸಂಸದರ ಕಚೇರಿ ಹಾಗೂ ನಿವಾಸಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಲ್ಐಸಿ ಸಂಘಟನೆ ದಕ್ಷಿಣ ವಲಯದ ಅಧ್ಯಕ್ಷ ಎಲ್. ಮಂಜುನಾಥ್ ಬುಧವಾರ ಹೇಳಿದರು.ಪಟ್ಟಣದಲ್ಲಿ ನಡೆದ ಜೀವವಿಮ ಪ್ರತಿನಿಧಿಗಳ ಸಮಾವೇಶದ ನಂತರ ಸಂಸದರ ನಿವಾಸದ ಮತ್ತು ಕಚೇರಿ ಎದುರು ಪ್ರತಿಭಟನೆ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಜೀವವಿಮ ಪ್ರತಿನಿಧಿಗಳ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಈ ಎರಡು ಸರ್ಕಾರಗಳ ಗಮನ ಸೆಳೆಯುವ ಉದ್ದೇಶದಿಂದ ಜ.24ರಂದು ಸಂಸದರ ಕಚೇರಿ ಮತ್ತು ನಿವಾಸಗಳ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ವಿಮಾ ಮಸೂದೆ ವಾಪಸ್ ಪಡೆಯುವಂತೆ ಪ್ರತಿನಿಧಿಗಳಿಂದ ಬೃಹತ್ ದೆಹಲಿ ಚಲೋ ನಡೆಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಕೇಂದ್ರ ಸರ್ಕಾರ ಜೀವ ವಿಮಾ ನಿಗಮ ಅಸ್ಥಿರಗೊಳಿಸುವ ಭಾಗವಾಗಿ ವಿದೇಶಿ ನೇರ ಬಂಡವಾಡ ಹಾಗೂ ಎಲ್ಐಸಿ ಮಾರಾಟಕ್ಕೆ ಅವಕಾಶ ನೀಡಿರುವುದು ಖಂಡನೀಯ. ಇದರಿಂದ ಎಲ್ಐಸಿಯನ್ನೇ ಸಾಂಪ್ರದಾಯಿಕವಾಗಿ ನಂಬಿಕೊಂಡಿರುವ 27 ಕೋಟಿ ಪಾಲಿಸಿದಾರಿಗೆ ನಷ್ಟ ಉಂಟಾಗಲಿದೆ ಎಂದರು.ಕೇಂದ್ರ ಸರ್ಕಾರ ಈಗಾಗಲೇ ಜಿಎಸ್‌ಟಿ ತೆರಿಗೆ ಏರಿರುವುದರಿಂದ ಪಾಲಿಸಿದಾರರಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಅಲ್ಲದೆ ವಿದೇಶಿ ನೇರ ಬಂಡವಾಳದಿಂದ ಹಾಗೂ ಷೇರು ಮಾರಾಟದ ನೀತಿಯಿಂದ ಪಾಲಿಸಿದಾರರು ಎಲ್ಐಸಿ ಇಂದ ವಿಮುಖರಾಗುವ ಸಾಧ್ಯತೆ ದಟ್ಟವಾಗಿದೆ ಎಂದುಆತಂಕ ವ್ಯಕ್ತಪಡಿಸಿದರು.ವಿಮಾ ಕಂಪನಿಗೆ 5 ಲಕ್ಷಕ್ಕೂ ಹೆಚ್ಚು ವಿಮ ಕಂತು ಪಾವತಿ ಮಾಡುವ ಪಾಲಿಸಿದಾರರಿಗೆ ತೆರಿಗೆ ಹಾಕುವ ಪದ್ಧತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ನಿಮ್ಮ ಪ್ರತಿನಿಧಿಗಳಿಗೆ ಸಾಮಾಜಿಕ ಸೌಲಭ್ಯ ನೀಡಲು ಕಲ್ಯಾಣ ನಿಧಿ ಜಾರಿಗೆ ತರಬೇಕು ಎಂದು ಸಂಘಟನೆ ವಲಯ್ಯಾಧ್ಯಕ್ಷ ಮಂಜುನಾಥ್ ಒತ್ತಾಯಿಸಿದರು. ಸಂಘಟನೆ ಮುಖಂಡರಾದ ಸಿದ್ದಲಿಂಗ ಒಡೆಯರ್ ಸಿ ಪ್ರದೀಪ್. ಆನೆ ದೊಡ್ಡಿ ಜಯರಾಮ್. ವಿಶಾಲಾಕ್ಷಿ ಇದ್ದರು.