ಧರ್ಮಸ್ಥಳದ ವಿರುದ್ಧ ಷಡ್ಯಂತ್ರ: ಬಿಜೆಪಿ ಪ್ರತಿಭಟನೆ

| Published : Aug 26 2025, 01:05 AM IST

ಸಾರಾಂಶ

ಧರ್ಮದ ಉಳಿವಿಗಾಗಿ ಧರ್ಮಯುದ್ಧ ಘೋಷವಾಕ್ಯದೊಂದಿಗೆ ನಡೆದ ಪ್ರತಿಭಟನಾ ಮೆರವಣಿಗೆ ಮೂರುಸಾವಿರ ಮಠದಿಂದ ಆರಂಭಗೊಂಡು, ಮಹಾವೀರಗಲ್ಲಿ, ತುಳಜಾಭವಾನಿ ಸರ್ಕಲ್, ದಾಜೀಬಾನ್ ಪೇಠ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ಎದುರು ಆಗಮಿಸಿ ಬಹಿರಂಗ ಸಮಾವೇಶವಾಗಿ ಪರಿವರ್ತನೆಗೊಂಡಿತು.

ಹುಬ್ಬಳ್ಳಿ: ಧರ್ಮಸ್ಥಳ ಬಗ್ಗೆ ಅಪಪ್ರಚಾರ ಹಾಗೂ ಷಡ್ಯಂತ್ರ ವಿರೋಧಿಸಿ ಬಿಜೆಪಿ ಮಹಾನಗರ ಘಟಕ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಧರ್ಮದ ಉಳಿವಿಗಾಗಿ ಧರ್ಮಯುದ್ಧ ಘೋಷವಾಕ್ಯದೊಂದಿಗೆ ನಡೆದ ಪ್ರತಿಭಟನಾ ಮೆರವಣಿಗೆ ಮೂರುಸಾವಿರ ಮಠದಿಂದ ಆರಂಭಗೊಂಡು, ಮಹಾವೀರಗಲ್ಲಿ, ತುಳಜಾಭವಾನಿ ಸರ್ಕಲ್, ದಾಜೀಬಾನ್ ಪೇಠ ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ತಹಸೀಲ್ದಾರ್ ಕಚೇರಿ ಎದುರು ಆಗಮಿಸಿ ಬಹಿರಂಗ ಸಮಾವೇಶವಾಗಿ ಪರಿವರ್ತನೆಗೊಂಡಿತು. ಇಬ್ಬರು ಕಾರ್ಯಕರ್ತರು ಅನಾಮಿಕನ ಪಾತ್ರದ ವೇಷಧರಿಸಿದ್ದು ಗಮನಸೆಳೆಯಿತು. ಪ್ರತಿಭಟನಾಕಾರರು ಅಪಪ್ರಚಾರ ಬಗ್ಗೆ ಘೋಷಣೆ ಕೂಗಿದರು. ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಕಳೆದ ಹಲವು ದಿನಗಳಿಂದ ಧರ್ಮಸ್ಥಳ ಸುತ್ತಮುತ್ತ ಅನಾಮಿಕ ವ್ಯಕ್ತಿ ತೋರಿಸಿದ ಜಾಗಗಳನ್ನು ಅಗೆದರೂ ಏನೂ ಸಿಗಲಿಲ್ಲ. ಕೊನೆಗೆ ಅನಾಮಿಕನ ಬಂಧನದೊಂದಿಗೆ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದರು. ಇದಲ್ಲದೇ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಹೇಳಿಕೆ ನೀಡಿದ್ದರು. ಇದೆಲ್ಲ ಗಮನಿಸಿದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ್ರಚಾರ ಮಾಡುವ ಹುನ್ನಾರ ಇದೆ ಎಂಬುದು ಸತ್ಯವಾದಂತಾಗಿದೆ ಎಂದರು.

ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇದೆ. ಇನ್ನಷ್ಟು ಸೂಕ್ತ ತನಿಖೆ ನಡೆಸಿ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲು ಮಾಡಬೇಕು. ಪೊಲೀಸರ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ಹೊಂದಿದೆ. ನಿತ್ಯ ಲಕ್ಷಾಂತರ ಭಕ್ತಾಧಿಗಳು ಬರುತ್ತಾರೆ. ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ಷಡ್ಯಂತ್ರ ಮಾಡಿ ಧಾರ್ಮಿಕ ಭಾವನೆ ಅಪಮಾನಿಸುವ ದುರದ್ದೇಶದಿಂದ ಹೀಗೆ ಮಾಡಲಾಗಿದೆ. ಅನಾಮಿಕ ವ್ಯಕ್ತಿ ಬುರುಡೆ ತಂದಾಗಲೇ ಆತನ ಬಗ್ಗೆ ತನಿಖೆ ಮಾಡಬೇಕಿತ್ತು. ಅದನ್ನು ಮಾಡದೇ ಆಧಾರಗಳಿಲ್ಲದೇ ಆತ ಹೇಳಿದ ಮಾತ್ರಕ್ಕೆ ಗುಂಡಿ ತೆಗೆಯುವ ಕೆಲಸ ಮಾಡಿದೆ. ಹೀಗೆ ಬಿಟ್ಟಿದ್ದರೆ ಮಂಜುನಾಥ ಸನ್ನಿಧಿ ಬಳಿಯೇ ಅಗೆಯುವ ಕೆಲಸ ಮಾಡುತ್ತಿದ್ದರೇನೋ?. ಮಂಜುನಾಥ ಸ್ವಾಮಿಯೇ ಬಂದು ಸತ್ಯವನ್ನು ಬಯಲಿಗೆ ಬರುವಂತೆ ಮಾಡಿದ್ದಾನೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಪ್ರೀತಿ ಖೋಡೆ, ರೂಪಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಮುಖಂಡರಾದ ವೆಂಕಟೇಶ ಕಾಟವೆ, ದತ್ತಮೂರ್ತಿ ಕುಲಕರ್ಣಿ, ರಂಗಾ ಬದ್ಧಿ, ಮೇನಕಾ ಹುರಳಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.