ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಷಡ್ಯಂತ್ರ

| Published : Aug 19 2025, 01:01 AM IST

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಆರಂಭಗೊಂಡಿರುವ ಅಪಪ್ರಚಾರಕ್ಕೆ ಸರ್ಕಾರ ಕಡಿವಾಣ ಹಾಕದಿರುವುದು ಶೋಚನೀಯ ಸಂಗತಿ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಡಾ.ವೀರೇಂದ್ರ ಹೆಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಲು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ರಾಜವಾಡೆಯ ಶ್ರೀ ಶಿವಭವಾನಿ ಮಂದಿರದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯು ಕತ್ರಿ ಭಜಾರ, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತದ ಮೂಲಕ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಬಳಿಕ ಗ್ರೇಡ್-೨ ತಹಸೀಲ್ದಾರ್‌ ಪ್ರದೀಪ ದೇವಗಿರಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಧರ್ಮಸ್ಥಳ ಕ್ಷೇತ್ರದ ಬಗ್ಗೆ ಆರಂಭಗೊಂಡಿರುವ ಅಪಪ್ರಚಾರಕ್ಕೆ ಸರ್ಕಾರ ಕಡಿವಾಣ ಹಾಕದಿರುವುದು ಶೋಚನೀಯ ಸಂಗತಿ. ಈ ಕುರಿತು ಕೂಡಲೇ ಮುಖ್ಯಮಂತ್ರಿಗಳು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಕಾರ್ಯ ಮಾಡದಿದ್ದರೆ ಜನರೇ ತಕ್ಕಪಾಠ ಕಲಿಸಲು ನಿರ್ಧರಿಸಿದ್ದಾರೆಂದರು.

ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಮುಖಂಡ ವಿಜಯಸಿಂಗ್ ಹಜೇರಿ ಮಾತನಾಡಿ, ಧರ್ಮಸ್ಥಳದ ವಿಷಯ ಈಗಾಗಲೇ ರಾಜ್ಯ, ದೇಶ ವ್ಯಾಪ್ತಿ ಹರಡಿದೆ. ಈ ದುಷ್ಕೃತ್ಯಕ್ಕೆ ಮುಂದಾದವರನ್ನು ಕೂಡಲೇ ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕು. ಧರ್ಮಸ್ಥಳ ದೇವಾಲಯ ವಿರುದ್ಧ ನಿರಂತರವಾಗಿ ಸುಳ್ಳಸುದ್ದಿ, ಅಪಪ್ರಚಾರ ಮಾಡುತ್ತಾ, ಧರ್ಮಾಧಿಕಾರಿ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಮಾಡುತ್ತಿರುವುದ್ದರಿಂದ ಲಕ್ಷಾಂತರ ಭಕ್ತಾಧಿಗಳಿಗೆ ಅತೀವ ನೋವಾಗಿದೆ. ಹಾಗಾಗೀ ಧರ್ಮಾಧಿಕಾರಿ ಹಾಗೂ ದೇವಾಲಯದ ಹೆಸರು ಕೆಡಿಸುತ್ತಿರುವವರನ್ನು ಕೂಡಲೇ ಬಂಧಿಸಿ, ಪಾಠ ಕಲಿಸಬೇಕೆಂದು ಆಗ್ರಹಿಸಿದರು.

ಮಹಿಳಾ ಮುಖಂಡರಾದ ದೀಲ್‌ಶಾದ್ ಮಾತನಾಡಿ, ಈಗಾಗಲೇ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದನ್ನು ಕ್ಷೇತ್ರದ ಭಕ್ತ ವೃಂದದವರಾದ ನಾವೆಲ್ಲರೂ ಗೌರವಿಸುತ್ತೇವೆ. ತನಿಖೆಯು ಅರ್ಥಪೂರ್ಣವಾಗಿ ಕೊನೆಗೊಳ್ಳಲಿ. ಸುಳ್ಳ ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದ್ದಾರೆ ಮತ್ತು ಈ ಎಲ್ಲ ಕಾರ್ಯಗಳಿಗೆ ಅವರಿಗೆ ಬರುತ್ತಿರುವ ಆದಾಯದ ಮೂಲಗಳನ್ನು ವಿಚಾರಿಸಬೇಕು. ಕೂಡಲೇ ಈ ಕುಚೇಷ್ಟೆಗಳ ಬ್ಯಾಂಕ್ ಖಾತೆಗಳನ್ನು ತಪಾಸಣೆ ನಡೆಸಬೇಕೆಂದು ಮನವಿ ಮಾಡಿದರು.

ಬೆಳಗ್ಗೆಯಿಂದ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು ಧರ್ಮಸ್ಥಳ ಘಟನೆ ಖಂಡಿಸಿ ತಮ್ಮ ಆಕ್ರೋಶ ಹೊರ ಹಾಕಿ ಪ್ರತಿಭಟಿಸದರು.

ಈ ವೇಳೆ ಡಾ.ವ್ಹಿ.ಎಸ್.ಕಾರ್ಚಿ, ಸುಧಿರ ದೇಶಪಾಂಡೆ, ಪ್ರಭು ಗೋಗಿ, ಡಾ.ಅನೀಲ ಇರಾಜ, ಬಿ.ಜಿ.ಸುರಪೂರ, ಎಂ.ಡಿ. ಧನಪಾಲ, ವ್ಹಿ.ಕೆ.ಪ್ರಥಮಶೆಟ್ಟಿ, ಕೆ.ಜಿ.ಪ್ರಥಮಶೆಟ್ಟಿ, ನೇಮಿನಾಥ ಧನಪಾಲ, ಎಸ್.ಬಿ.ಹಜೇರಿ, ವ್ಹಿ.ಎನ್.ಧನಪಾಲ, ಕೆ.ಎಂ.ಹಿರೇಮಠ, ಗುಂಡುರಾವ್ ಧನಪಾಲ, ಆರ್.ಬಿ.ದಮ್ಮೂರಮಠ, ವಾಸುದೇವ ಹೆಬಸೂರ, ಜಿ.ಜಿ.ಮದರಕಲ್ಲ, ರಾಜು ಹಂಚಾಟೆ, ಶ್ರೀಪಾದ ಸಂಗ್ಮಿ, ರತ್ನಪ್ಪ ಪ್ರಥಮಶೆಟ್ಟಿ, ಕೆ.ಎಸ್.ಸಂಗ್ಮಿ, ಅಣ್ಣಪ್ಪ ಜಗತಾಪ, ರಾಘವೇಂದ್ರ ವಿಜಾಪೂರ, ಪ್ರಮೋದ ಅಗರವಾಲಾ, ಜೈಸಿಂಗ್ ಮೂಲಿಮನಿ, ಮುದಕಣ್ಣ ಬಡಿಗೇರ, ಚಂದ್ರು ಬಬಲೇಶ್ವರ, ಆರ್.ಬಿ.ಸುರಪೂರ, ಎಸ್.ಎಸ್.ಯಾಥಗಿರಿ, ಪಿ.ಎ.ಸುರಪೂರ, ರಾಜಣ್ಣ ಸೊಂಡೂರ, ಪ್ರಕಾಶ ಕಟ್ಟಿಮನಿ, ಚವ್ಹಾಣ, ಸಿದ್ದು ಬೆಳಗುಂಪಿ, ಒಳಗೊಂಡು ಅಸಂಖ್ಯಾತ ಮಹಿಳೆಯರು ಪಾಲ್ಗೊಂಡಿದ್ದರು.

ಧರ್ಮಾಧಿಕಾರಿಗಳು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಕ್ಷೇತ್ರದ ಮಂಜುನಾಥ ಸ್ವಾಮಿ ಹೆಸರಿನ ಮೇಲೆ ಆಗುತ್ತಿರುವ ಅದೇಷ್ಟೋ ಪುಣ್ಯದ ಕಾರ್ಯಗಳ ಲಾಭವನ್ನು ಅಸಂಖ್ಯಾತ ಭಕ್ತರು ಪಡೆದುಕೊಂಡಿದ್ದಾರೆ. ಇಂತಹ ದೇವಾಲಯ, ಧರ್ಮಾಧಿಕಾರಿಗಳ ಮೇಲೆ ಸಾರ್ವಜನಿಕವಾಗಿ ಕೀಳುಮಟ್ಟದ, ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಅವರ ಮನೋವೈಕಲ್ಯ ತೋರಿಸುತ್ತಿದೆ. ಕೂಡಲೇ ಈ ವಿರೋಧೀಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.