ಸಾರಾಂಶ
ಶಿರಹಟ್ಟಿ: ಹಿಂದುಗಳ ಪವಿತ್ರ ಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಕೆಲವರು ಷಡ್ಯಂತ್ರ ರೂಪಿಸಿ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಇಂತಹ ದುಷ್ಕೃತ್ಯದ ಅಸಲಿ ಮುಖ ಕಳಚಲು ಪ್ರಕರಣವನ್ನು ಎಸ್‌ಐಟಿ ಬದಲಿಗೆ ಎನ್‌ಐಎಗೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಶಾಸಕ ಡಾ. ಚಂದ್ರು ಕೆ.ಲಮಾಣಿ ಒತ್ತಾಯಿಸಿದರು.
ಬಿಜೆಪಿ ಮಂಡಲದಿಂದ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮದ ಉಳಿವಿಗಾಗಿ ಧರ್ಮ ಯುದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಫಕೀರೇಶ್ವರ ಮಠದಿಂದ ಬೃಹತ್ ಮೆರವಣಿಗೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡುವ ಮೂಲಕ ಹಿಂದು ಬಾಂಧವರ ನಂಬಿಕೆಗೆ ಧಕ್ಕೆ ಮಾಡಲು ಸುಳ್ಳು ಕೃತ್ಯ ಅಪ್ರಮಾಣಿಕ ವಿಡಿಯೋ ಪ್ರಕಟಿಸಿ ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಶೀಘ್ರವಾಗಿ ಬಂಧಿಸಿ ಹಿಂದು ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದರು.
ಧರ್ಮಸ್ಥಳ ಕ್ಷೇತ್ರದ್ದು ಮೊದಲ ಘಟನೆಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಿಂದು ದೇವಸ್ಥಾನ ಒಡೆಯುವ ಹುನ್ನಾರ ಈ ಹಿಂದೆಯೂ ಸರ್ಕಾರ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.ಎಸ್‌ಐಟಿ ರಚನೆಗೂ ಮುನ್ನ ಮುಸುಕುದಾರಿ ಯಾರು? ಎಲ್ಲಿಯವ ಎಂಬುವುದರ ಕುರಿತು ಕಿಂಚಿತ್ತು ವಿಚಾರಿಸದೇ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ. ಯಾರೋ ಅನಾಮಿಕಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡು ಧರ್ಮಸ್ಥಳಕ್ಕೆ ಕಳಂಕ ಹಚ್ಚುವ ಕೆಲಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಗಳ ಧಾರ್ಮಿಕ ಕ್ಷೇತ್ರ ಶ್ರೀಮಂಜುನಾಥನ ಮೇಲೆ ಅಪಪ್ರಚಾರ ಮಾಡುತ್ತಿದ್ದರೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಸಮೀರ್ ಎಂಬ ಅಯೋಗ್ಯನ ಸುಳ್ಳು ಕೃತ್ಯದ ವಿಡಿಯೋ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಮಸಿ ಬಳಿಯಲು ಯತ್ನಿಸುವ ಯಡಪಂಥಿ ವರ್ಗದವರ ತಾಳಕ್ಕೆ ಕುಣಿದು ಒಡೆದು ಆಳುವ ನೀತಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.ಶಿವಪ್ರಕಾಶ ಮಹಾಜನಶೆಟ್ಟರ್, ಬಿ.ಡಿ.ಪಲ್ಲೇದ, ತಿಮ್ಮರಡ್ಡಿ ಮರಡ್ಡಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದು ದೇವಾಲಯಗಳಿಗೆ ಕನ್ನ ಹಾಕುತ್ತಿದೆ. ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಸಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ಮೋಹನ್ ಗುತ್ತೆಮ್ಮನವರ, ಬಸವರಾಜ ಪೂಜಾರ, ನಂದಾ ಪಲ್ಲೇದ, ತಿಪ್ಪಣ್ಣ ಕೊಂಚಿಗೇರಿ, ಮಹೇಶ ಬಡ್ನಿ, ಕಲ್ಲಪ್ಪ ಹಡಪದ, ಶಂಕರ ಮರಾಠೆ, ರಾಮಣ್ಣ ಕಂಬಳಿ, ಸಿದ್ರಾಮಪ್ಪ ಮೊರಬದ, ಪುಂಡಲೀಕ ಲಮಾಣಿ, ಶಿವು ಲಮಾಣಿ, ಪ್ರವೀಣ ಪಾಟೀಲ, ರಾಜು ಮಾಂಡ್ರೆ, ಸುರೇಶ ಮಾಂಡ್ರೆ, ಸಂಜೀವ ಸೋಗಿನ, ಬಸವರಾಜ ವಡವಿ ಸೇರಿದಂತೆ ಸಾವಿರಾರು ಸಂಖ್ಯೆಯ ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು. ಶಿರಸ್ಥೆದಾರ ಎಚ್.ಜೆ. ಬಾವಿಕಟ್ಟಿ ಮನವಿ ಸ್ವೀಕರಿಸಿದರು.