ಸಾರಾಂಶ
ಬ್ಯಾಡಗಿ: ಪ್ರವರ್ಗ 2ಏ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನಡೆದ ಹೋರಾಟದ ವೇಳೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ಕ್ರಮ ಖಂಡಿಸಿ ವೀರಶೈವ ಪಂಚಮಸಾಲಿ ಸಮಾಜ ತಾಲೂಕು ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪುರಸಭೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ ಮೂಲಕ ಸಾಗಿ ಬಳಿಕ ತಹಸೀಲ್ದಾರ್ ಕಚೇರಿ ತಲುಪಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪಕ್ಷಾತೀತ ಹೋರಾಟ ನಡೆಸಿದ್ದೇವೆ, ಇದು ಬಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ, ಆದರೆ ಸರ್ಕಾರ ಪ್ರತಿಭಟನಾಕಾರರನ್ನು ಮಾತುಕತೆಗೆ ಆಹ್ವಾನಿಸಿದ್ದರೂ ಆಗಮಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಲ್ಲ, ಈ ಪ್ರತಿಭಟನೆ ಸಿದ್ಧತೆ ಕಳೆದ ಎರಡು ತಿಂಗಳಿಂದ ನಡೆದಿದೆ. ಇಂಟಿಲಿಜೆನ್ಸ್ ರಿಪೋರ್ಟ್ ಕಳುಹಿಸಿಲ್ಲವೇ ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿ ಬಳಿ ಬಂದು ಸಿಎಂ ಖುದ್ದಾಗಿ ಮಾತನಾಡಬಹುದಿತ್ತಲ್ಲ ಎಂದರು.
ಸಮಾಜದ ಜನರ ವಿರುದ್ಧ ಪಿತೂರಿ: ಮುಖಂಡ ಶಂಕರಗೌಡ ಪಾಟೀಲ (ಬುಡಪನಹಳ್ಳಿ) ಮಾತನಾಡಿ, ಬಸವ ಜಯಮೃತ್ಯುಂಜಯ ಸ್ವಾಮಿ ಪಂಚಮಸಾಲಿ ನೇತೃತ್ವದಲ್ಲಿ ಲಿಂಗಾಯತರಿಗೆ 2ಎ ಮೀಸಲಾತಿಗೆ ಆಗ್ರಹಿಸಿ 5 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳೊಂದಿಗೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತಲ್ಲದೇ, ಸಂಕೀರ್ಣದ ಬಳಿ ಪ್ರತಿಭಟನೆಗೆ ಅವಕಾಶ ನೀಡಿತ್ತು. ನಮ್ಮ ಹೋರಾಟದ ವಿರುದ್ಧ ಪಿತೂರಿ ನಡೆಸಿದ ಸರ್ಕಾರ ವಿಧಾನಸೌಧದ ಬಳಿ ನಮ್ಮನ್ನು ಕರೆಸಿಕೊಂಡು ಪೊಲೀಸರು ಆಯಕಟ್ಟಿನ ಮೂಲೆಗಳಿಂದ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದಾರೆ. ಸರಳ ಉಡುಪಿನಲ್ಲಿ ಪೊಲೀಸರು ತಮ್ಮ ವಾಹನಗಳ ಮೇಲೆ ಕಲ್ಲು ಎಸೆದು ಬಳಿಕ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದರು.ಕೂಡಲೇ ಬಿಡುಗಡೆಗೊಳಿಸಿ: ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ಅರವಿಂದ ಬೆಲ್ಲದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನವೇ ರಾಜ್ಯದ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (OBC) ಕೋಟಾದಡಿ ಪ್ರವರ್ಗ 2ಎಗೆ ಸೇರ್ಪಡೆಗೊಳ್ಳಲು ಅನುಮತಿ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಎದುರಿಸಲು ಸಜ್ಜಾಗುವಂತೆ ಎಚ್ಚರಿಸಿದರು.
ಜಯದೇವ ಶಿರೂರ ಮಾತನಾಡಿ, ರಾಜ್ಯದ 224 ವಿಧಾನಸಭೆಯ ಸ್ಥಾನಗಳಲ್ಲಿ ಸುಮಾರು 90ರಿಂದ 100ರಷ್ಟು ಸ್ಥಾನಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಪ್ರತಿಯೊಬ್ಬ ಪಂಚಮಸಾಲಿಗಳನ್ನು ಕೆಣಕಿದ್ದೀರಿ, ಮುಂದಿನ ಪರಿಣಾಮ ಎದುರಿಸುವಂತೆ ಎಚ್ಚರಿಸಿದರು.ಪಂಚಮಸಾಲಿ ಸಮಾಜದ ಮುಖಂಡರು, ಸದಸ್ಯರು, ಮಹಿಳಾ ವಿಭಾಗದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.