ಟಿ.ಬೇಕುಪ್ಪೆ ಸರ್ಕಾರಿ ಶಾಲೆ ಮುಚ್ಚಲು ಅಧಿಕಾರಿಗಳ ಸಂಚು

| Published : Jan 01 2025, 12:02 AM IST

ಸಾರಾಂಶ

ಕನಕಪುರ: ತಾಲೂಕಿನ ಟಿ.ಬೇಕುಪ್ಪೆ ಗ್ರಾಮದ ಕಿರಿಯ ಸರ್ಕಾರಿ ಶಾಲೆಯನ್ನು ಅಧಿಕಾರಿಗಳೇ ಉದ್ದೇಶಪೂರ್ವಕವಾಗಿ ಮುಚ್ಚುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲಗಾಟ ಆಡುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ಕನಕಪುರ: ತಾಲೂಕಿನ ಟಿ.ಬೇಕುಪ್ಪೆ ಗ್ರಾಮದ ಕಿರಿಯ ಸರ್ಕಾರಿ ಶಾಲೆಯನ್ನು ಅಧಿಕಾರಿಗಳೇ ಉದ್ದೇಶಪೂರ್ವಕವಾಗಿ ಮುಚ್ಚುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲಗಾಟ ಆಡುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಟಿ.ಬೇಕುಪ್ಪೆ ಗ್ರಾಮಸ್ಥರೊಂದಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಟಿ.ಬೇಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಪುಣ್ಯಶ್ರೀ, ಎರಡನೆ ತರಗತಿಯಲ್ಲಿ ಸೌಮ್ಯ, ಒಂದನೇ ತರಗತಿಯಲ್ಲಿ ಪ್ರಶಾಂತ್ ಎಂಬ ವಿದ್ಯಾರ್ಥಿ ಓದುತ್ತಿದ್ದಾರೆ. ಆದರೆ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಶಾಮೀಲಾಗಿ ಶಾಲೆ ಮುಚ್ಚುವ ದುರುದ್ದೇಶದಿಂದ ಶೂನ್ಯ ದಾಖಲಾತಿ ಹೊಂದಿದ ಕಾರಣ ಶಾಲೆ ಮುಚ್ಚಬೇಕೆಂದು ಶಿಕ್ಷಣ ಇಲಾಖೆಗೆ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

ಇತರ ಶಾಲೆಗಳು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಶಾಲೆಯ ಶಿಕ್ಷಕಿ ನಿರ್ಮಲಾ ಪರೀಕ್ಷಾ ಕಾಲದಲ್ಲಿ ಡಿ.6ರಿಂದ ಶಾಲೆ ಮುಚ್ಚಿ ಪೋಷಕರಿಗೆ ಬಲವಂತವಾಗಿ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಒತ್ತಡ ಹೇರುತ್ತಿದ್ದಾರೆ. ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ದುರುದ್ದೇಶದಿಂದ ಶಿಕ್ಷಣ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಸಮುದಾಯ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ

ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ, ಹೆಚ್ಚುವರಿ ಶಿಕ್ಷಕರನ್ನು ನೇಮಕಾತಿ ಮಾಡುವ ಯಾವುದೇ ಕಾರ್ಯ ಯೋಜನೆಗಳು ನಡೆಯುತ್ತಿಲ್ಲ. ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚಿಸುವ ಅಭಿಯಾನಗಳನ್ನು ಇಲಾಖೆ ಮಾಡುವುದು, ಶಾಲಾ ದಾಖಲಾತಿಗಳನ್ನು ಹೆಚ್ಚಿಸುವ ಯಾವ ಇಚ್ಚಾಶಕ್ತಿಯು ಇಲಾಖೆಯಲ್ಲಿ ಕಾಣುತ್ತಿಲ್ಲ. ರಾಜ್ಯದ ಉಪಮುಖ್ಯಮಂತ್ರಿಗಳ ತವರಲ್ಲೇ ಈ ರೀತಿಯ ಘಟನೆ ನಡೆಯುತ್ತಿರುವುದು ಅಕ್ಷಮ್ಯ ಅಪರಾಧ ಹಾಗೂ ಕನ್ನಡ ಜನತೆಗೆ ಮಾಡುತ್ತಿರುವ ಮೋಸ ಎಂದು ದೂರಿದರು.

ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಇಲಾಖೆ ಆಟವಾಡುತ್ತಾ ಮಕ್ಕಳ ಶಿಕ್ಷಣದ ಹಕ್ಕನ್ನು ಧಮನ ಮಾಡುತ್ತಿದೆ. ಬಡವರು, ರೈತರ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಕಲಿಸುತ್ತಾ ಇಲಾಖೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ಮಾತನಾಡಿ, ಸರ್ಕಾರಿ ಶಾಲೆಗಳು ಗ್ರಾಮೀಣ ಜನರ ಜೀವಾಳ, ಅಸ್ತಿತ್ವವಾಗಿವೆ. ತಮ್ಮ ಊರಿಗೆ ಶಾಲೆಯ ಕನಸನ್ನು ನನಸಾಗಿಸಲು ಅದೆಷ್ಟೋ ಜೀವಗಳು ಶ್ರಮಿಸಿವೆ. ಏಕಾಏಕಿ ಮಕ್ಕಳ ಸಂಖ್ಯೆಕುಸಿತದ ನೆಪವೊಡ್ಡಿ, ಶಾಲೆ ವೀಲಿನದ ಹೆಸರಲ್ಲಿ ಶಾಲೆ ಮುಚ್ಚಿದರೆ ಅವರ ಹೋರಾಟಕ್ಕೆ ಮಸಿ ಬಳಿದಂತೆ. ಪ್ರತಿ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಗ್ರಾಮಸ್ಥರು ಕೈಜೋಡಿಸಿ ಸರ್ಕಾರಿ ಶಾಲೆ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಟಿ. ಬೇಕುಪ್ಪೆ ಗ್ರಾಮದ ದಿವ್ಯ, ಸುಮಿತ್ರ , ಲಕ್ಷ್ಮೀ, ಮರಿದೇವರು, ರತ್ನಮ್ಮ, ರಾಜಣ್ಣ, ಉಮೇಶ,ರೈತ ಸಂಘದ ಪುಟ್ಟಮಾದೇಗೌಡ, ವೆಂಕಟೇಶ್ , ರವಿ, ಮುಂತಾದವರು ಹಾಜರಿದ್ದರು.

ಕೋಟ್‌.................

ನಾಳೆಯಿಂದಲೇ ಶಾಲೆಗೆ ಶಿಕ್ಷಕರನ್ನು ನಿಯೋಜಿಸಿ ಶಾಲೆ ತೆರೆದು, ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ನೀಡುತ್ತೇನೆ.

-ಮತ್ತೀಗೌಡ, ಬಿಇಒ, ಕನಕಪುರ

ಕೆ ಕೆ ಪಿ ಸುದ್ದಿ 03:

ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ತಾಲೂಕು ಪ್ರಗತಿಪರ ಹಾಗೂ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.