ಸಾರಾಂಶ
ಅಥಣಿ : ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ವ್ಯವಸ್ಥಿತ ಪಿತೂರಿ ಮಾಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಆ.12 ರಂದು ಮನವಿ ಸಲ್ಲಿಸಲಾಗುವುದು ಎಂದು ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ ಹೇಳಿದರು.
ಪಟ್ಟಣದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಅಪಪ್ರಚಾರ ಮಾಡುತ್ತಿರುವ ಮಹೇಶ್ ಶೆಟ್ಟಿ, ತಿಮರೋಡಿ, ಗಿರೀಶ್ ಮಟ್ಟಣ್ಣನವರು, ಸಮೀರ್, ಸಂತೋಷ್ ಶೆಟ್ಟಿ, ಜಯಂತ್.ಟಿ ಹಾಗೂ ಇವರ ಸಹಚರರು ಸೇರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಧರ್ಮಸ್ಥಳ ಮತ್ತು ಇದರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕಳಂಕವನ್ನು ತರುವ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದರು.
ಹಿಂದು ಧರ್ಮದ ದೇವಾಲಯದ ಬಗ್ಗೆ ಕೀಳಾಗಿ ಮಾತಾನಾಡುತ್ತ ಇದ್ದಾರೆ. ಇವರ ಮೇಲೆ ಶೀಘ್ರ ಕ್ರಮ ಕೈಗೊಳ್ಳಲು ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತಿದ್ದೇವೆ. ಆದ್ದರಿಂದ ಅಥಣಿ ತಾಲೂಕಿನ ಕ್ಷೇತ್ರ ಭಕ್ತರು, ಪೂಜ್ಯ ಹೆಗ್ಗಡೆಯವರ ಅಭಿಮಾನಿಗಳು, ಪ್ರಯೋಜನಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸಕಾಲದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.