ಸಾರಾಂಶ
- ಭೀಮಾ ಕೊರೆಗಾಂವ್ ವಿಜಯೋತ್ಸವಕ್ಕೆ ಹರಿದು ಬಂದ ಜನಸಾಗರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನದ ಆಶಯಗಳನ್ನು ತಿರುಚುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಜೇವರ್ಗಿ ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಮಹಾ ಸ್ವಾಮೀಜಿ ನುಡಿದರು.ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಮೆರವಣಿಗೆ ನಂತರ ನಡೆದ ಸಮಾವೇಶದಲ್ಲಿ ಶ್ರೀಗಳು ಮಾತನಾಡಿದರು. ಸಂವಿಧಾನ ತಿರುಚುವ ಮನುವಾದಿಗಳ ಷಡ್ಯಂತ್ರದ ವಿರುದ್ಧ ದಲಿತ ಸಂಘಟನೆಗಳು ಗಟ್ಟಿಯಾಗಿ ನಿಲ್ಲಬೇಕು. ಜೊತೆಗೆ ಆ ಶಕ್ತಿಗಳನ್ನು ಹತ್ತಿಕ್ಕಲು ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ದಲಿತರು ಮೌಢ್ಯಗಳು ಮತ್ತು ಕಂದಾಚಾರ ಗಳಿಂದ ದೂರವಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ. 12ನೇ ಶತಮಾನದ ಬಸವಣ್ಣನವರ ಕಾಲ ದಿಂದಲೂ ಜೀವಂತವಾಗಿರುವ ಜಾತಿ ವ್ಯವಸ್ಥೆ ಕಿತ್ತೊಗೆಯಲು ದಲಿತ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು. ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅಂತರ್ಜಾತಿ ವಿವಾಹವಾಗುವ ಪ್ರೇಮಿಗಳನ್ನು ಹತ್ಯೆ ಮಾಡುತ್ತಿರುವುದೇ ಜೀವಂತ ಸಾಕ್ಷಿ. ಮೂಢನಂಬಿಕೆ ಮೂಲಕ ಕಂದಾಚಾರಗಳಿಗೆ ಮಾರು ಹೋಗಿರುವ ದಲಿತರು ದೇವರನ್ನು ಪೂಜಿಸುವ ಬದಲು ತಮ್ಮ ಮನೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಫೋಟೋ ಇಟ್ಟು ಪೂಜಿಸುವುದು ಸೂಕ್ತವೆಂದು ಹೇಳಿದರು.ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಹಾಗೂ ಐಎಎಸ್ ಮಾಜಿ ಅಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆ ಕಿತ್ತೊಗೆಯಲು ಅನೇಕ ಚಳುವಳಿ, ಹೋರಾಟಗಳು ನಡೆದರೂ ಈ ಅನಿಷ್ಠ ಪದ್ಧತಿ ಭಾರತ ದೇಶದಲ್ಲಿ ಇನ್ನೂ ಜೀವಂತವಾಗಿದೆ. ಈ ಜಾತಿ ವ್ಯವಸ್ಥೆ ಕಿತ್ತೊಗೆಯಬೇಕಾದರೆ ದಲಿತರ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.ಪ್ರಗತಿಪರ ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಜಕ್ಕಪ್ಪ ಮಾತನಾಡಿ, ಭೀಮಾ ಕೊರೆಗಾಂವ್ ಒಂದು ಸ್ವತಂತ್ರ್ಯ ಹೋರಾಟದ ಜೊತೆಗೆ ಶೌರ್ಯದ ಸಂಕೇತ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.ಚಿಕ್ಕಮಗಳೂರು ನಗರದಲ್ಲಿ ಇಂದು ನಡೆಯುತ್ತಿರುವ ಈ ಕಾರ್ಯಕ್ರಮ ಇತಿಹಾಸ ಸೇರಿದೆ. ಭೀಮಾ ಕೊರೆಗಾಂವ್ ವಿಜಯೋತ್ಸವಕ್ಕೆ ಅಪೂರ್ವ ಸ್ಪಂದನೆ ಸಿಕ್ಕಿದೆ. ಇಂದು ನಡೆದ ಮೆರವಣಿಗೆಗೆ ಸಹಸ್ರಾರು ಸಂಖ್ಯೆಯ ಜನಸಾಗರವೇ ಹರಿದು ಬಂದಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ ಯಶಸ್ವಿಯಾಗಲು ಶ್ರಮಿಸಿದ ಸಂಘಟಕರ ಶ್ರಮ ಶ್ಲಾಘನೀಯವೆಂದರು.ಮಹಾನಾಯಕ ಧಾರವಾಹಿ ಡಾ. ಬಿ.ಆರ್. ಅಂಬೇಡ್ಕರ್ ಪಾತ್ರಧಾರಿ ಅಥರ್ವ ಸಂತೋಷ್ ಕಾರ್ವೆ ಸಮಾರಂಭದಲ್ಲಿ ಪಾಲ್ಗೊಂಡು ಕನ್ನಡದಲ್ಲೇ ಮಾತನಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ದಲಿತ ಸಂಘಟನೆ ಮುಖಂಡ ಹಾಗೂ ವಕೀಲ ಅನಿಲ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಹೊನ್ನೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಮುಖಂಡರಾದ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಕೆ.ಟಿ. ರಾಧಾಕೃಷ್ಣ, ಭೀಮಯ್ಯ, ಕುರುವಂಗಿ ವೆಂಕಟೇಶ್, ಉಮೇಶ್ ಕುಮಾರ್, ಹಿರೇಮಗಳೂರು ರಾಮಚಂದ್ರ, ಕೆ. ಭರತ್, ಹರೀಶ್ ಮಿತ್ರ, ಪ್ರವೀಣ್, ಅರುಣ್‌ಕುಮಾರ್, ಪರಮೇಶ್, ಗಿರೀಶ್, ದಂಟರ ಮಕ್ಕಿ ಶ್ರೀನಿವಾಸ್, ನವರಾಜ್, ಜವರಪ್ಪ, ಉಪ್ಪಳ್ಳಿ ರಾಜಣ್ಣ, ನಾಗರತ್ನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹುಣಸೇಮಕ್ಕಿ ಲಕ್ಷ್ಮಣ್ ಸ್ವಾಗತಿಸಿದರು. 9 ಕೆಸಿಕೆಎಂ 2: ಭೀಮಾ ಕೊರೆಗಾಂವ್ ವಿಜಯೋತ್ಸವದ ಆಚರಣೆ ಅಂಗವಾಗಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಚಿಕ್ಕಮಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಯಿತು.