ಸಾರಾಂಶ
-ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ
----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಪೊಲೀಸ್ ಬಂದೋಬಸ್ತಿನಲ್ಲಿ ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಅವರು, ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಸರ್ವೇ ನಂಬರ್ 300ರ ಒಟ್ಟು ಕ್ಷೇತ್ರ 9-25 ಎ-ಗುಂಟೆ ಜಮೀನು ಇದು ಗೈರಾಣಿ ಜಮೀನಾಗಿದ್ದು, ಈ ಜಮೀನಿನಲ್ಲಿ ಸಾಮಾನ್ಯವಾಗಿ ಗಿಡ-ಗಂಟಿಗಳು ಬೆಳೆದಿವೆ. ಆ ಜಮೀನಿನಲ್ಲಿ ಗ್ರಾಮದ ಬಡ ರೈತರು ತಮ್ಮ ಜನ-ಜಾನುವಾರು ಮೇಯಿಸುತ್ತಾರೆ. ಆದರೆ, ಇದೇ ಗೈರಾಣಿ ಜಮೀನನ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಜಮೀನಿನ ಮೇಲೆ ಬಿದ್ದಿದೆ. ಅದನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡುವುದರ ಜೊತೆಗೆ ಹಳ್ಳದ ಪಕ್ಕದಲ್ಲಿರುವ ಜಮೀನಿನಲ್ಲಿ ಸಾಕಷ್ಟು ಮರಳು ಶೇಖರಣೆಯಾಗಿದ್ದು, ಅಕ್ರಮ ಮರಳು ಸಾಗಿಸಿ, ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಹಣ ಸಂಪಾದಿಸುತ್ತಿದ್ದಾರೆ. ಈ ಜಮೀನಲ್ಲಿ ತೆಗ್ಗು-ಗುಂಡಿ ಇದ್ದು, ಅಕ್ರಮದಾರರಿಂದ ತಗ್ಗು-ಗುಂಡಿ ಮುಚ್ಚಿಸಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಬೇಕೆಂದು ಆಗ್ರಹಿಸಿದರು.ಈ ಗೈರಾಣಿ ಜಮೀನು ಸಾರ್ವಜನಿಕರ ಉಪಯೋಗಕ್ಕೆ ಮತ್ತು ಸಮುದಾಯದವರು ಮರಣಿಸಿದಾಗ ಅವರ ಶವ ಹೂಳಲು ಅವಕಾಶ ಕಲ್ಪಿಸಬೇಕು, ಕೆಲ ಜನರು ತಮ್ಮ ದನ-ಕರುಗಳು ಮತ್ತು ಕುರಿಗಳು ಇದೇ ಜಮೀನಿನಲ್ಲಿ ಮೇಯಿಸುತ್ತಿರುತ್ತಾರೆ. ಈ ಗ್ರಾಮದಲ್ಲಿ ಇದೊಂದೆ ಗೈರಾಣಿ ಜಮೀನು ಇರುವುದರಿಂದ ಈ ಜಮೀನನ್ನು ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ಬಳಕೆಯಾಗಬೇಕು. ಇದು ಖಾಸಗಿ ಬಳಕೆಗೆ ಬಿಡಬಾರದೆಂದು ಒತ್ತಾಯಿಸಿದರು. ನಾಮಫಲಕ ಅಳವಡಿಸಿ, ಅಕ್ರಮವೆಸಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಶಾಂತಪ್ಪ, ಶರಣಗೌಡ ಮಾಲಿ ಪಾಟೀಲ್, ಶಂಕರೆಪ್ಪ ದೊಡ್ಡಮೇಟಿ, ದಂಡಪ್ಪಗೌಡ, ಪರ್ವತರೆಡ್ಡಿ, ಶಿವಪ್ಪ ನಾಟೇಕರ್, ಹಯ್ಯಾಳಪ್ಪಗೌಡ ಸೇರಿದಂತೆ ಅನೇಕರು ಇದ್ದರು.
------ಫೋಟೊ: ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
27ವೈಡಿಆರ್2