ಅಪಹರಿಸಿ ಕೊಲೆ ಮಾಡಲು ಸಂಚು: 6 ಜನರ ಬಂಧನ

| Published : Jun 22 2024, 12:49 AM IST

ಸಾರಾಂಶ

ಜೂ. 19ರಂದು ರಾತ್ರಿ ಸಿದ್ಧಾರೂಢ ಮಠದ ಬಳಿ ಅಪರಾಧ ಕೃತ್ಯ ಎಸಗಲು 7 ಜನರ ತಂಡ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಹಳೇಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ನೇತೃತ್ವದ ತಂಡ ಮೊದಲಿಗೆ ಇಬ್ಬರನ್ನು ಬಂಧಿಸಿತ್ತು.

ಹುಬ್ಬಳ್ಳಿ:

ಇಲ್ಲಿಯ ಸಿದ್ಧಾರೂಢ ಮಠದ ಬಳಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ ಬಾಲಕ ಸೇರಿ 6 ಜನರನ್ನು ಮಾರಕಾಸ್ತ್ರ ಸಮೇತ ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ, ಜೂ. 19ರಂದು ರಾತ್ರಿ ಸಿದ್ಧಾರೂಢ ಮಠದ ಬಳಿ ಅಪರಾಧ ಕೃತ್ಯ ಎಸಗಲು 7 ಜನರ ತಂಡ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಹಳೇಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ನೇತೃತ್ವದ ತಂಡ ಮೊದಲಿಗೆ ಇಬ್ಬರನ್ನು ಬಂಧಿಸಿತ್ತು. ಈ ವೇಳೆ ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಮಫ್ತಿಯಲ್ಲಿ ತೆರಳಿ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವನ್ನು ಪೊಲೀಸರ ತಂಡ ತಪ್ಪಿಸಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಗದೀಶನಗರದ ಮಂಜುನಾಥ ಪಾಂಚಾನ(21), ಸೋನಿಯಾಗಾಂಧಿ ನಗರದ ಪವನ ಗಬ್ಬೂರ(22), ಅರವಿಂದನಗರದ ವಿನಾಯಕ ದುಂಡಿ (20), ಜಗದೀಶನಗರದ ನಾಗರಾಜ ಮಿರಜಕರ (59), ರಾಜಪ್ಪ ಹನಮನಹಳ್ಳಿ (28) ಹಾಗೂ ಅಪ್ರಾಪ್ತನೊಬ್ಬನನ್ನು ಬಂಧಿಸಲಾಗಿದೆ. ಅಲ್ಲದೇ, ಆರೋಪಿತರಿಂದ 2 ತಲ್ವಾರ್‌, 2 ಚಾಕು, ಆಟೋ ಹಾಗೂ 2 ಬೈಕ್‌ ಜಪ್ತಿ ಮಾಡಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ಆನಂದನಗರದ ಗಣೇಶ ಬಿಲಾನಾ ಎಂಬಾತ ತಲೆ ಮರೆಸಿಕೊಂಡಿದ್ದುಘಿ, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ತನಿಖೆಯಲ್ಲಿ ಹಳೇವೈಷ್ಯಮ ಹಿನ್ನೆಲೆಯಲ್ಲಿ ದೀಪಕ ಧಾರವಾಡ ಎಂಬಾತನ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎಂದು ಆರೋಪಿಗಳ ಬಾಯಿಬಿಟ್ಟಿದ್ದಾರೆ. ತಲೆ ಮರೆಸಿಕೊಂಡ ಆರೋಪಿ ಗಣೇಶ ಜತೆಗೆ ವ್ಯವಹಾರ ಕುದುರಿಸುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಈ ವೈಷ್ಯಮದ ಹಿನ್ನೆಲೆಯಲ್ಲಿ ಗಣೇಶ ತಂಡ ಕಟ್ಟಿಕೊಂಡು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು ಎಂದು ತಿಳಿದು ಬಂದಿದೆ. ಅಲ್ಲದೇ, ದೀಪಕ ಕೂಡಾ ರೌಡಿಶೀಟರ್‌ ಮಾದರಿಯ ಹಲವು ಚಟವಟಿಕೆಗಳಲ್ಲಿ ಭಾಗಿ ಇರುವ ಬಗ್ಗೆ ಕಂಡು ಬಂದಿದೆ. ಅಲ್ಲದೇ, ಬಂಧಿತರು ಸಹ ವಿವಿಧ ಬಗೆಯ ಅಪರಾಧಿಕ ಕೃತ್ಯದಲ್ಲಿ ಪಾಲ್ಗೊಂಡವರಾಗಿದ್ದಾರೆ. ಹೀಗಾಗಿ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಎಲ್ಲ ಮಾಹಿತಿ ಹೊರಬರಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸಿ.ಆರ್‌. ರವೀಶ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್ಕ, ವಿನೋಧ ಮುಕ್ತೆದಾರ, ಹಳೇಹುಬ್ಬಳ್ಳಿ ಠಾಣೆ ಪಿಐ ಸುರೇಶ ಯಳ್ಳೂರ ಸೇರಿದಂತೆ ಇತರರು ಇದ್ದರು.

ಅಪರಾಧ ಚಟುವಟಿಕೆ ತಡೆಗೆ ಹು-ಧಾ ಮಹಾನಗರ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲ್ಲಣಕ್ಕೆ ಕಾರಣವಾಗಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿಯೂ ರಾಜಕೀಯ ಒತ್ತಡಕ್ಕೆ ಮಣಿಯದೇ ಕಮಿಷ್ನರೇಟ್‌ನ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

- ರೇಣುಕಾ ಸುಕುಮಾರ, ಪೊಲೀಸ್‌ ಕಮಿಷನರ್‌