ರೊಹಿಂಗ್ಯಾಗಳನ್ನು ಸ್ಥಳೀಯರೆಂದು ಅಧಿಕೃತಗೊಳಿಸಲು ಒಳಸಂಚು: ನಾಚಪ್ಪ ಆರೋಪ

| Published : Sep 09 2025, 01:01 AM IST

ರೊಹಿಂಗ್ಯಾಗಳನ್ನು ಸ್ಥಳೀಯರೆಂದು ಅಧಿಕೃತಗೊಳಿಸಲು ಒಳಸಂಚು: ನಾಚಪ್ಪ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಸೇರಿಸಬೇಕೆಂದು ಒತ್ತಾಯಿಸಿ ಗೋಣಿಕೊಪ್ಪದಲ್ಲಿ ಸಿಎನ್‌ಸಿ ವತಿಯಿಂದ 12ನೇ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ರಾಜ್ಯ ಸರ್ಕಾರದ ವತಿಯಿಂದ ಸೆ.9ರಿಂದ ಪುನರರಾಂಭಗೊಳ್ಳುವ ಜಾತಿವಾರು ಜನಗಣತಿಯಲ್ಲಿ ಕೊಡಗಿನಲ್ಲಿ ಅಕ್ರಮವಾಗಿ ಆಶ್ರಯ ಪಡೆದಿರುವ ರೋಹಿಂಗ್ಯ ಹಾಗೂ ಬಾಂಗ್ಲಾದೇಶಿಗರನ್ನು ಸ್ಥಳೀಯ ನಾಗರೀಕರು ಮತ್ತು ಮತದಾರರೆಂದು ದಾಖಲಿಸುವ ಸಾಧ್ಯತೆಗಳಿವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಸೇರಿಸಬೇಕೆಂದು ಒತ್ತಾಯಿಸಿ ಗೋಣಿಕೊಪ್ಪದಲ್ಲಿ ಸಿಎನ್‌ಸಿ ವತಿಯಿಂದ ನಡೆದ 12ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋಹಿಂಗ್ಯ ಹಾಗೂ ಬಾಂಗ್ಲಾದೇಶಿಗರನ್ನು ಸ್ಥಳೀಯರೆಂದು ಅಧಿಕೃತಗೊಳಿಸುವ ಒಳ ಸಂಚು ನಡೆದಿದ್ದು, ಕೊಡವರು ಈ ಕುರಿತು ಜಾಗೃತರಾಗಿ ಕೊಡವ ಲ್ಯಾಂಡನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್ ನೀಡಿದಂತೆ ಕೊಡಗಿನಲ್ಲೂ ಕಾರ್ಮಿಕ ಸಮಸ್ಯೆಯನ್ನು ನೀಗಿಸಲು ವಲಸಿಗ ಕಾರ್ಮಿಕರಿಗೆ ಗೆಸ್ಟ್ ವರ್ಕರ್ ಪರ್ಮಿಟ್ ನೀಡಬೇಕು. ವಾರ್ಷಿಕ ಕೆಲಸ ಮುಗಿದ ನಂತರ ಅವರ ರಾಜ್ಯ ಅಥವಾ ದೇಶಕ್ಕೆ ಹಿಂದಿರುಗಬೇಕು. ಮತ್ತೆ ಬರಬೇಕಾದರೆ ವರ್ಕ್ ಪರ್ಮಿಟ್ ನವೀಕರಣಗೊಳಿಸುವ ಪದ್ಧತಿ ಜಾರಿಗೆ ತರಬೇಕು. ಆ ಮೂಲಕ ಜನಸಂಖ್ಯೆ ಪಲ್ಲಟಕ್ಕೆ ತಡೆ ಹಾಕಬೇಕು ಎಂದು ಹೇಳಿದರು.2015ರಲ್ಲಿ ನರೇಂದ್ರ ಮೋದಿ-ಶೇಕ್ ಹಸೀನಾ ಒಪ್ಪಂದ ಢಾಕಾದಲ್ಲಿ ನಡೆದಾಗ ಅದರ ಮೂಲ ತಿರುಳೇ ಈ ಗೆಸ್ಟ್ ವರ್ಕರ್ ಪರ್ಮಿಟ್ ಆಗಿತ್ತು. ಕೊಡಗಿನಲ್ಲಿಯೂ ಅದನ್ನು ಮುಂದುವರಿಸಬೇಕು. ಆದರೆ ದುರುಳ ರಾಜಕರಣಿಗಳು-ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಕ್ರಮ ಕೂಟಕ್ಕೆ ವೋಟ್ ಬ್ಯಾಂಕ್ ಸೃಷ್ಟಿ, ಭೂಮಿ ಕಬ್ಜ ಮತ್ತು ಮರ ಹನನ ಮುಖ್ಯ ಗುರಿಯಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್‌ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಕೊಲ್ಲಿರ ಗಯಾ, ಕಾಡ್ಯಮಾಡ ಗೌತಮ್, ಡಾ ಕಾಳಿಮಾಡ ಶಿವಪ್ಪ, ಕಂಬೀರಂಡ ಬೋಪಣ್ಣ, ಚೆಪ್ಪುಡಿರ ಕಾರ್ಯಪ್ಪ, ಕೊದೇಂಗಡ ನಟೇಶ್, ಕೇಚಮಾಡ ಶರತ್, ಪಾಲೆಂಗಡ ಮನು ನಂಜಪ, ಚೊಟ್ಟೆಯಂಡಮಾಡ ಉದಯ, ಮಾಣಿರ ಪ್ರವೀಣ್, ಮಾಣಿರ ಸಂಪತ್, ಚಿರಿಯಪಂಡ ಶ್ಯಾಮ್ ಮತ್ತಿತರರು ಪಾಲ್ಗೊಂಡಿದ್ದರು.

18ರಂದು ಮೂರ್ನಾಡಿನಲ್ಲಿ ಜನಜಾಗೃತಿ:

ಕೊಡವ ಲ್ಯಾಂಡ್‌ಗೆ ಹಾಗೂ ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರ, ವಿರಾಜಪೇಟೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸೆ.18ರಂದು ಬೆಳಗ್ಗೆ 10.30 ಗಂಟೆಗೆ ಮೂರ್ನಾಡಿನಲ್ಲಿ 13ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.