ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಹೊಸದಾಗಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಮೈಷುಗರ್ ಕಾರ್ಖಾನೆಯನ್ನು ಮಾರಾಟ ಮಾಡಲು ಸಂಚು ರೂಪಿಸಿದೆಯೇ ಎಂಬ ಬಗ್ಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೂದನೂರು ಬೊಮ್ಮಯ್ಯ ಆತಂಕ ವ್ಯಕ್ತಪಡಿಸಿದರು.
ಸರ್ಕಾರದಿಂದ ಹಣವನ್ನು ತಂದು ಅತ್ಯಾಧುನಿಕ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆಯನ್ನು ಈಗಿರುವ ಸಕ್ಕರೆ ಕಾರ್ಖಾನೆ ಜಾಗದಲ್ಲೇ ನಿರ್ಮಾಣ ಮಾಡಲಿ. ಹಾಲಿ ಇರುವ ಸಕ್ಕರೆ ಕಾರ್ಖಾನೆ ಪ್ರದೇಶಕ್ಕೆ ಸಾರಿಗೆ-ಸಂಪರ್ಕ ವ್ಯವಸ್ಥೆ ಬಹಳ ಉತ್ತಮವಾಗಿದೆ. ಕಬ್ಬು ಸರಬರಾಜಿಗೆ ಉತ್ತಮ ಅವಕಾಶಗಳಿವೆ. ಇಲ್ಲಿಂದ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸಬಾರದು. ಕಾರ್ಖಾನೆ ನಿರ್ಮಾಣ ಪಾರದರ್ಶಕವಾಗಿರಬೇಕು. ಯಾವುದೇ ಖಾಸಗಿ ಸಂಸ್ಥೆ, ಕಂಪನಿಗಳೊಂದಿಗೆ ಒಪ್ಪಂದಕ್ಕೆ ಅವಕಾಶವಿಲ್ಲದಂತೆ ಕಾರ್ಖಾನೆಯನ್ನು ಸ್ಥಾಪಿಸುವಂತೆ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಶಾಸಕ ಪಿ.ರವಿಕುಮಾರ್ ಮನೆ ಮನೆಯಿಂದ ಮಣ್ಣು ತರುವ ಬಾಲಿಶ ಹೇಳಿಕೆಗಳನ್ನು ನೀಡುವ ಬದಲು ಸರ್ಕಾರದಿಂದ ಹೊನ್ನು ತಂದು ರೈತರ ಮನೆಗಳಿಂದ ಕಳಸವನ್ನು ತಂದು ಪೂಜಿಸಲಿ ಎಂದ ಬೊಮ್ಮಯ್ಯ ಸಲಹೆ ನೀಡಿದರು.
೨೦೦೦ ದಿಂದೀಚೆಗೆ ಜಿಲ್ಲೆಯಲ್ಲಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಮಂಡ್ಯ ನಾಗರಿಕರನ್ನು, ರೈತರನ್ನು ವಂಚಿಸುತ್ತಾ ನಂಬಿಕೆ ದ್ರೋಹವೆಸಗಿ ಸಾರ್ವಜನಿಕ ಸರ್ಕಾರಿ ಸ್ವತ್ತುಗಳನ್ನು ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಂಡು ಅವರು ಅಭಿವೃದ್ಧಿಯಾಗುತ್ತಿದ್ದಾರೆಯೇ ವಿನಃ ಮಂಡ್ಯ ನಾಗರೀಕರು ಹಾಗೂ ರೈತರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಈಗ ಲೋಕಸಭೆ ಚುನಾವಣೆ ಇರುವುದರಿಂದ ಜಿಲ್ಲೆಯ ಮತದಾರರಿಗೆ ಭರವಸೆ ಮತ್ತು ಆಶ್ವಾಸನೆ ನೀಡಿ ಮತಪಡೆಯುವ ಹುನ್ನಾರವಾಗಿರಬಹುದೆಂಬ ಅನುಮಾನ ಮಂಡ್ಯದ ನಾಗರಿಕರಲ್ಲಿ ಮೂಡಿದೆ. ಏಕೆಂದರೆ, ಏಷ್ಯಾ ಖಂಡದಲ್ಲೇ ಎರಡನೇ ಅತಿ ದೊಡ್ಡ ಕಾರ್ಖಾನೆ ಎಂದು ಪ್ರಸಿದ್ಧಿ ಪಡೆದಿದ್ದ ದಿ ಮೈಸೂರು ಅಸಿಟೇಟ್ ಕೆಮಿಕಲ್ಸ್ ಕಾರ್ಖಾನೆಯನ್ನು ೨೦೦೬ರಲ್ಲಿ ಅಂದಿನ ಸರ್ಕಾರ ಕಾನೂನು ವ್ಯಾಪ್ತಿಯೊಳಗೆ ರಹಸ್ಯ ಹರಾಜಿನ ಮೂಲಕ ಕೊಪ್ಪದ ಎಸ್.ಎಂ.ಷುಗರ್ ಕಂಪನಿಗೆ ೧೧೪ ಎಕರೆಯಲ್ಲಿದ್ದ ಕಾರ್ಖಾನೆಗೆ ಸಂಬಂಧಿಸಿದ ಯಂತ್ರೋಪಕರಣಗಳೂ, ಕಟ್ಟಡಗಳು ಸೇರಿದಂತೆ ೧೫.೨೦ ಕೋಟಿ ರು.ಗೆ ಮಾರಾಟ ಮಾಡಡಿತ್‌ತು. ಎಸ್.ಎಂ.ಷುಗರ್ ಕಾರ್ಖಾನೆಯ ಈ ಸ್ವತ್ತನ್ನು ಚಿನ್ನಮಸ್ತ ಕಂಪನಿಗೆ ನಾಮಿನಿ ಮಾಡಿ ನೇರವಾಗಿ ಕ್ರಯ ಮಾಡಿಸಿತ್ತು.ಈಗ ಚಿನ್ನಮಸ್ತ ಕಂಪನಿ ಆ ಸ್ಥಳದಲ್ಲಿ ಕಾವೇರಿ ಸಿರಿ ಶೀರ್ಷಿಕೆಯಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದೆ ಎಂದು ಬೇಸರದಿಂದ ನುಡಿದರು.
ಮೈಸೂರು ಮಹಾರಾಜರು ಕಟ್ಟಿ ಮಂಡ್ಯ ಕೆರೆಯನ್ನು ಉಳಿಸಿಕೊಂಡು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ೧೧೪ ಎಕರೆ ಜಾಗದಲ್ಲಿ ನಿವೇಶನ ನಿರ್ಮಾಣ ಮಾಡಬಹುದಿತ್ತು. ಜನಪ್ರತಿನಿಧಿಗಳು ಕಾಲಕ್ಕೆ, ಸಮಯಕ್ಕೆ ತಕ್ಕಂತೆ ಮಾತು ಬದಲಿಸುತ್ತಾರೆ. ಈಗಾಗಲೇ ಮಂಡ್ಯದ ಎರಡು ಕಣ್ಣುಗಳಾಗಿದ್ದ ಅಸಿಟೇಟ್ ಕಾರ್ಖಾನೆಯ ಒಂದು ಕಣ್ಣನ್ನು ಕಳೆದುಕೊಂಡಿದ್ದು, ಈಗ ಹಾಲಿ ಇರುವ ಮೈಷುಗರ್ ಕಾರ್ಖಾನೆಯ ಕಣ್ಣನ್ನೂ ಕಿತ್ತುಕೊಂಡು ಕಂಪನಿ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವರೆಂಬ ಭಯ ಕಾಡುತ್ತಿದೆ. ಹಾಗಾಗಿ ಮೈಷುಗರ್ ಆಸ್ತಿಯನ್ನು ಉಳಿಸಿಕೊಂಡು ಹೊಸ ಕಾರ್ಖಾನೆ ನಿರ್ಮಿಸುವಂತೆ ಒತ್ತಾಯಿಸಿದರು. ಗೋಷ್ಠಿಯಲ್ಲಿ ಪುಟ್ಟಸ್ವಾಮಿ, ದಿನೇಶ್, ಚಲುವರಾಜು, ಸುರೇಶ್‌ಗೌಡ ಇದ್ದರು.