ಗಣೇಶೋತ್ಸವ ನಿಲ್ಲಿಸಲು ಷಡ್ಯಂತ್ರ, ವಿದೇಶಿ ಕೈವಾಡ

| Published : Sep 30 2024, 01:29 AM IST

ಸಾರಾಂಶ

ರಾಜ್ಯದಲ್ಲಿ ಗಣೇಶೋತ್ಸವವನ್ನು ಮುಂದಿನ ದಿನಗಳಲ್ಲಿ ನಿಲ್ಲಿಸುವ ಅತ್ಯಂತ ವ್ಯವಸ್ಥಿತ ಷಡ್ಯಂತ್ರ, ಪಿತೂರಿ ನಡೆದಿದೆ. ವಿದೇಶಿ ಕೈವಾಡವೂ ಇದರ ಹಿಂದಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಆರೋಪಿಸಿದರು.

- ಗಲಾಟೆಗೆ ಪ್ರಚೋದನೆ ನೀಡಿದವ್ರು, ಕಲ್ಲು, ಪೆಟ್ರೋಲ್ ಬಾಂಬ್‌ ಹಾಕಿದವರ ಮೇಲೆ ಕೇಸಿಲ್ಲ: ಯತ್ನಾಳ ಆಕ್ರೋಶ

- ಕಾಂಗ್ರೆಸ್‌ ಪಾಕಿಸ್ತಾನ ಸರ್ಕಾರದಂತೆ ವರ್ತಿಸುತ್ತಿದೆ, ಪ್ಯಾಲೆಸ್ತೀನ್ ಧ್ವಜಗಳ ಇಲ್ಲಿ ಹಾರಿಸಲಾಗುತ್ತಿದೆ ಎಂದು ಕಿಡಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಗಣೇಶೋತ್ಸವವನ್ನು ಮುಂದಿನ ದಿನಗಳಲ್ಲಿ ನಿಲ್ಲಿಸುವ ಅತ್ಯಂತ ವ್ಯವಸ್ಥಿತ ಷಡ್ಯಂತ್ರ, ಪಿತೂರಿ ನಡೆದಿದೆ. ವಿದೇಶಿ ಕೈವಾಡವೂ ಇದರ ಹಿಂದಿದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಆರೋಪಿಸಿದರು.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಸೇರಿದಂತೆ ಎಲ್ಲ ಕಡೆ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ ಎಸೆತ, ಮನೆಗಳು- ಅಂಗಡಿಗಳ ಮೇಲೆ ಕಲ್ಲು ತೂರಾಟ, ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಲಾಗಿದೆ. ಹೀಗಿದ್ದರೂ ಹಿಂದುಗಳು, ಹಿಂದು ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ಕಾರಣ ಎಂದರು.

ಗೃಹಮಂತ್ರಿ ಬೇಜವಾಬ್ದಾರಿ ಉತ್ತರ:

ನಾಗಮಂಗಲ ಗಣೇಶೋತ್ಸವ ವೇಳೆ ಪ್ರಚೋದನೆ ನೀಡಿದ್ದು, ಕಲ್ಲು ತೂರಿದ್ದು, ಪೆಟ್ರೋಲ್ ಬಾಂಬ್ ಹಾಕಿದ್ದು, ಅಂಗಡಿಗಳನ್ನು ಸುಟ್ಟವರೆ ಬೇರೆ. ಆದರೆ, ಹಿಂದುಗಳ ಮೇಲೆ 1ರಿಂದ 32ರವರೆಗೆ ಕೇಸ್ ದಾಖಲಿಸಲಾಗಿದೆ. ಕಲ್ಲು ತೂರಿದವರು, ಗಲಾಟೆಗೆ ಪ್ರಚೋದನೆ ನೀಡಿದವರು, ಪೆಟ್ರೋಲ್‌ ಬಾಂಬ್‌ ಹಾಕಿದವರ ಮೇಲೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ಆಕಸ್ಮಿಕ ಘಟನೆ. ಯಾರೂ ಬೇಕಂತಲೇ ಕಲ್ಲು ತೂರಿಲ್ಲವೆಂದು ಬೇಜವಾಬ್ಧಾರಿ ಉತ್ತರವನ್ನು ಗೃಹ ಮಂತ್ರಿ ನೀಡಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನ ಸರ್ಕಾರದಂತೆ ವರ್ತಿಸುತ್ತಿದೆ. ಭಾರತಕ್ಕೆ ಸಂಬಂಧವೇ ಇಲ್ಲದ ಪ್ಯಾಲೆಸ್ತೀನ್ ಧ್ವಜಗಳನ್ನು ಇಲ್ಲಿ ಹಾರಿಸಲಾಗುತ್ತಿದೆ. ಹಿಂದುಗಳ ಮೇಲೆ ಸವಾಲು ಹಾಕುವಂತಹದು ನಡೆಯುತ್ತಿದೆ. ಇದಕ್ಕೆಲ್ಲಾ ಸಿದ್ದರಾಮಯ್ಯ ಸರ್ಕಾರವೇ ಕಾರಣ. ದಾವಣಗೆರೆ ಗಣೇಶೋತ್ಸವದ ವೇಳೆ ಘೋರಿಗೆ ಹೋಗುವ ವೃದ್ಧನೊಬ್ಬ ಸವಾಲು ಹಾಕಿ, ವೀಡಿಯೋ ಬಿಟ್ಟಿದ್ದ. ಸವಾಲು ಹಾಕಿದ್ದವರಿಗೆ ಹಿಂದುಗಳು ಉತ್ತರವನ್ನೇ ನೀಡಬಾರದಾ? ದೇಶಕ್ಕೆ ಮಹಾನ್ ನಾಯಕರು, ಹೋರಾಟಗಾರರನ್ನು ನೀಡಿದ ಹಿಂದುಗಳು ಷಂಡರಲ್ಲ ಎಂದು ಅವರು ಹೇಳಿದರು.

ಸವಾಲಿಗೆ ಉತ್ತರ ಕೊಡಲು ಹೋಗಿದ್ದ ಹಿಂದು ಮುಖಂಡ ಸತೀಶ ಪೂಜಾರಿ ವಿರುದ್ಧವೇ ಕೇಸ್ ದಾಖಲಿಸಿದ್ದಾರೆ. ಅಲ್ಲದೇ, ಸತೀಶ ಪೂಜಾರಿ ಕುಟುಂಬದ ವಂಶವೃಕ್ಷವನ್ನು ಕೇಳಿ ಇಲ್ಲಿನ ಕೆಟಿಜೆ ನಗರ ಸಬ್ ಇನ್‌ಸ್ಪೆಪೆಕ್ಟರ್ ನೋಟಿಸ್‌ ಕೊಟ್ಟಿದ್ದಾರೆ. ಅದನ್ನು ತೆಗೆದುಕೊಂಡು ಪೊಲೀಸ್ ಇಲಾಖೆಯವರು ಏನು ಮಾಡುತ್ತೀರಿ? ಸತೀಶ ಪೂಜಾರಿ ವಂಶವೃಕ್ಷ ಕೇಳಿರುವ ಪೊಲೀಸರು ಕಾಂಗ್ರೆಸ್ಸಿನ ನಾಯಕ ರಾಹುಲ್ ವಂಶವೃಕ್ಷ ಮೊದಲು ಹೊರತೆಗೆಯಲಿ ಎಂದು ಸವಾಲು ಹಾಕಿದರು.

- - -

ಬಾಕ್ಸ್‌-1

* ಗಣೇಶ ಇಟ್ಟ ಜೀಪಿನಲ್ಲೇ ಸಿಎಂ ಸಿದ್ದು ಜೈಲು ಪಾಲು!

ದಾವಣಗೆರೆ: ಯಾರು ಗಣೇಶ ಮೂರ್ತಿಯನ್ನು ಪೊಲೀಸ್ ಜೀಪಿನಲ್ಲಿ ಒಯ್ದರೋ ಅದೇ ಪೊಲೀಸ್ ಅಧಿಕಾರಿ ಮುಂದಿನ ವರ್ಷದ ಗಣೇಶ ಹಬ್ಬಕ್ಕೆ ಗಣೇಶನನ್ನು ಅದೇ ಜೀಪಿನಲ್ಲಿ ತಂದು ಪ್ರತಿಷ್ಠಾಪಿಸುವಂತೆ ಮಾಡುತ್ತೇವೆ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅದೇ ಅಧಿಕಾರಿ ಗಣೇಶನಿಗೆ ಪೂಜೆ ಮಾಡಿ, ಗಣೇಶ ವಿಸರ್ಜನೆಯಲ್ಲಿ ಹೆಜ್ಜೆ ಹಾಕುವಂತೆ ಮಾಡುತ್ತೇವೆ. ಯಾವ ಗಣೇಶನನ್ನು ಪೊಲೀಸ್ ಜೀಪಿನಲ್ಲಿಡುವಂತೆ ಮಾಡಿತೋ, ಅದೇ ಸರ್ಕಾರದ ಅದೇ ಮುಖ್ಯಮಂತ್ರಿಯೂ ಅದೇ ಜೀಪಿನಲ್ಲೇ ಜೈಲಿಗೆ ಹೋಗುವುದನ್ನೂ ನಾವು ನೋಡುವ ದಿನಗಳು ದೂರವಿಲ್ಲ ಎಂದರು.

- - -

ಬಾಕ್ಸ್-2 * ದಾವಣಗೆರೆ ಎಸ್‌ಪಿ ವಿರುದ್ಧ ಗರಂ ದಾವಣಗೆರೆ: ಜಿಲ್ಲಾ ಎಸ್‌ಪಿ ಅವರು ಐಪಿಎಸ್ ಆಗಿದಿರೋ, ಏನಾಗಿದಿರೋ ಗೊತ್ತಿಲ್ಲ. ಕಲ್ಲು ಎಸೆದವರು, ಬಾಟಲು ಎಸೆದವರ ಮೇಲೆ ಕೇಸ್ ಹಾಕದೇ, ಹಿಂದುಗಳ ಮೇಲೆ 1ರಿಂದ 32 ಕೇಸ್ ದಾಖಲಿಸಿರುವ ಪೊಲೀಸರು ಈಗ ಹಿಂದು ಮುಖಂಡ ಸತೀಶ ಪೂಜಾರಿ ವಂಶವೃಕ್ಷ ಕೇಳಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದರು.

2 ಸಾವಿರ ಬಾಟಲು ಸೀಜ್ ಮಾಡಿದ್ದೀರಲ್ಲ, ಎಷ್ಟು ಕೇಸ್ ದಾಖಲಿಸಿದ್ದೀರಿ? ಕರ್ನಾಟಕ ಪೊಲೀಸ್ ಆಗಿ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷ ಏಜೆಂಟರಾಗಿ ಕೆಲಸ ಮಾಡಬೇಡಿ. ಮುಂದೆ ನಮ್ಮದೇ ಸರ್ಕಾರ ಬರೋದು, ನೆನಪಿರಲಿ ಪೊಲೀಸರೆ. ಕೇವಲ ಹಿಂದುಗಳ ಹಬ್ಬದ ಮೇಲೆ ನಿಬಂಧನೆ ಹೇರುತ್ತೀರಲ್ಲಾ? ಒಂದು ಕೋಮಿನ ರಕ್ಷಣೆ ಮಾಡಿ, ಹಿಂದು ಸಮಾಜವನ್ನು ಟಾರ್ಗೆಟ್ ಮಾಡುತ್ತೀರಾ ಎಂದು ವಿಜಯಪುರ ಶಾಸಕ ಪ್ರಶ್ನಿಸಿದರು.

- - - (-ಫೋಟೋ: ಬಸವನಗೌಡ ಪಾಟೀಲ ಯತ್ನಾಳ)