ಪ್ರಾಮಾಣಿಕತೆ ಮೆರೆದ ಕಾನ್‍ಸ್ಟೇಬಲ್‌ ದಯಾನಂದ ಜಮಾದಾರ

| Published : Nov 14 2025, 01:00 AM IST

ಪ್ರಾಮಾಣಿಕತೆ ಮೆರೆದ ಕಾನ್‍ಸ್ಟೇಬಲ್‌ ದಯಾನಂದ ಜಮಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಣ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ ರೈತನಿಗೆ ಸುರಪುರ ಠಾಣೆಯ ಕಾನ್‌ಸ್ಟೇಬಲ್ ದಯಾನಂದ ಜಮಾದಾರ್ ಮಂಗಳವಾರ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಹಣ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ ರೈತನಿಗೆ ಸುರಪುರ ಠಾಣೆಯ ಕಾನ್‌ಸ್ಟೇಬಲ್ ದಯಾನಂದ ಜಮಾದಾರ್ ಮಂಗಳವಾರ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಘಟನೆ ವಿವರ: ತಾಲೂಕಿನ ಅರಳಹಳ್ಳಿ ಗ್ರಾಮದ ರೈತ ಗೌಡಪ್ಪಗೌಡ ಮಾಲಿಪಾಟೀಲ ತಾನು ಬೆಳೆದ ಹತ್ತಿಯನ್ನು ಸುರಪುರದ ಕಾಟನ್ ಮಿಲ್‍ಗೆ ಮಾರಾಟ ಮಾಡಿ ಬಂದ ₹1,47,410 ರುಗಳನ್ನು ಶಾಲ್‍ನಲ್ಲಿ ಸುತ್ತಿ ಟ್ರ್ಯಾಕ್ಟರ್ ಬ್ಯಾಗ್‍ನಲ್ಲಿ ಇಟ್ಟು ತಾನೇ ಚಾಲನೆ ಮಾಡಿ ಹೊರಟಿದ್ದರು.

ದೇವಪುರ ಬ್ರಿಜ್ ಹತ್ತಿರದ ದೇವಿ ದೇವಸ್ಥಾನದ ಹತ್ತಿರ ಜಂಪ್‍ಗೆ ಶಾಲ್ ಸಮೇತ ಹಣ ಕೆಳಗೆ ಬಿದ್ದಿದೆ. ಅದೇ ಸಮಯಕ್ಕೆ ಅಲ್ಲಿ ಹೊರಟಿದ್ದ ಬೀಟ್ ಕಾನ್‌ಸ್ಟೇಬಲ್ ದಯಾನಂದ ಜಮಾದಾರ ಅವರಿಗೆ ಇದು ಕಣ್ಣಿಗೆ ಬಿದ್ದಿದೆ.

ಕೆಳಗೆ ಇಳಿದ ದಯಾನಂದ ಪರಿಶೀಲಿಸಿದಾಗ ಹಣ ಇದೆ. ಯಾರಾದರೂ ಬರಬಹುದು ಎಂದು ಅಲ್ಲೆ ಕೆಲ ಕಾಲ ನಿಂತರು. ಸ್ವಲ್ಪ ಹೊತ್ತಿನ ನಂತರ ಹಣ ಕಳೆದುಕೊಂಡ ವ್ಯಕ್ತಿ ಹುಡುಕುತ್ತಾ ಅಲ್ಲಿಗೆ ಬಂದ. ಆತನನ್ನು ಸಮಾಧಾನಪಡಿಸಿದ ದಯಾನಂದ ಎಲ್ಲ ಹಣ ನನ್ನ ಹತ್ತಿರ ಸುರಕ್ಷಿತವಾಗಿದೆ ಎಂದು ವ್ಯಕ್ತಿಯನ್ನು ಸುರಪುರ ಪೊಲೀಸ್ ಠಾಣೆಗೆ ಕರೆ ತಂದರು. ಅಲ್ಲಿ ಪಂಚನಾಮೆ ಮಾಡಿ ಅರಳಹಳ್ಳಿ ಗ್ರಾಮದ ಗಣ್ಯರ ಸಾಕ್ಷಿ ಪಡೆದು ಹಣ ಹಿಂತಿರುಗಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಇನ್ಸ್ಪೆಕ್ಟರ್ ಉಮೇಶನಾಯಕ, ದಯಾನಂದ ಅವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿ. ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿರ್ಗತಿಕರಿಗೆ ಊಟ ನೀಡಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇಂತಹವರಿಂದ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಎಂದು ಶ್ಲಾಘಿಸಿದರು. ಪಿಎಸ್‌ಐ ಕೃಷ್ಣ ಸುಬೇದಾರ, ದಯಾನಂದ ಜಮಾದಾರ ಉಪಸ್ಥಿತರಿದ್ದರು.