ಸಾರಾಂಶ
ಶ್ರೀರಂಗಪಟ್ಟಣ: ಯುವಕನ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸ್ ಪೇದೆಗೆ ಚಾಕು ಇರಿದ ಆರೋಪಿಯ ಎರಡೂ ಕಾಲುಗಳಿಗೂ ಪೊಲೀಸರು ಗುಂಡು ಹಾರಿಸಿರುವ ಘಟನೆ ಶ್ರೀರಂಗಪಟ್ಟಣ ಠಾಣಾ ವ್ಯಾಪ್ತಿಯ ಕರೀಘಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಾಲೂಕಿನ ಪಾಲಹಳ್ಳಿಯಲ್ಲಿ ಯುವಕ ಸುಪ್ರೀತ್ ಅಲಿಯಾಸ್ ಸುಪ್ಪಿ (30) ಯನ್ನು ಕಳೆದ ಜ.18ರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಪ್ರಮುಖ ಆರೋಪಿ ಪ್ರಮೋದ್ ನನ್ನು ಹಿಡಿಯುವ ವೇಳೆ ಪೊಲೀಸ್ ಪೇದೆ ಶರತ್ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ ಬಲ ತೋಳಿಗೆ ಚಾಕುವಿನಿಂದ ಚುಚ್ಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ಪೊಲೀಸರು ಪ್ರಮೋದ್‌ನ ಎರಡೂ ಕಾಲುಗಳಿಗೂ ಗುಂಡು ಹಾರಿಸಿ ಬಂಧಿಸಿದ್ದಾರೆ. ಚಾಕು ಇರಿತಕ್ಕೊಳಗಾದ ಪೇದೆ ಶರತ್ ಹಾಗೂ ಗುಂಡೇಟು ತಿಂದ ಪ್ರಮೋದ್‌ರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜನ ಬಾಲದಂಡಿ ಭೇಟಿ ನೀಡಿದ ಬಳಿಕ ಘಟನಾ ಸ್ಥಳವನ್ನು ಪರಿಶೀಲಿಸಿದರು.