ಸಾರಾಂಶ
ತುಮಕೂರು: ವಿಷ ಆಹಾರ ಹಾಗೂ ಕಲುಷಿತ ನೀರು ಸೇವನೆಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸಾವು, ನೋವು ಉಂಟಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಕೇವಲ 2 ತಿಂಗಳ ಅವಧಿಯಲ್ಲಿ ವಿಷ ಆಹಾರ- ಕಲುಷಿತ ನೀರು ಕುಡಿದು, ಜಿಲ್ಲೆಯಲ್ಲಿ ಬರೋಬ್ಬರಿ 10 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಪುಡ್ ಪಾಯಿಸನ್ ಕೇಸ್‌ಗಳು ಮರುಕಳಿಸುತ್ತಿದ್ದು ಆತಂಕ ಮನೆ ಮಾಡಿದೆ. ಮಧುಗಿರಿ ತಾಲೂಕು ಒಂದರಲ್ಲೇ ಎರಡು ಗಂಭೀರ ಪ್ರಕರಣಗಳು ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಮಧುಗಿರಿ ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಕಲುಷಿತ ನೀರು ಸೇವಿಸಿ ಬರೋಬ್ಬರಿ 6 ಮಂದಿ ಸಾವನ್ನಪ್ಪಿದ್ದರು. 150 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಜಿಲ್ಲಾಡಳಿತ 4 ಜನ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ವಯೋಸಹಜ ಸಾವು ಎಂದು ವರದಿ ನೀಡಿತ್ತು.
ಕಳೆದ 8 ದಿನದ ಹಿಂದೆ ಪಾವಗಡ ತಾಲೂಕಿನಲ್ಲಿ 20 ಮಂದಿ ಪುಡ್ ಪಾಯಿಸನ್‌ನಿಂದ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವೃದ್ದೆ ಸಾವನ್ನಪ್ಪಿದ್ದರು. ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಊಟ ಸೇವಿಸಿ ಅಸ್ವಸ್ಥರಾಗಿದ್ದರು.ಈಗ ಮಧುಗಿರಿ ತಾಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ನಡೆದ ದೇವರ ಕಾರ್ಯಕ್ರಮದಲ್ಲಿ ಊಟ ಸೇವಿಸಿ 18 ಮಂದಿಗೆ ವಾಂತಿಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಒಂದೇ ಗ್ರಾಮದಲ್ಲಿ ಸಾಲು ಸಾಲು ಮೂವರು ಸಾವನ್ನಪ್ಪಿದ್ದರು. ಇಬ್ಬರು ವೃದ್ದೆಯರು ವಯೋಸಹಜ ಸಾವು ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.
ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಆರೋಗ್ಯ ಇಲಾಖೆ ಮಾಡಬೇಕಾಗಿದೆ. ಅನ್ನಸಂತರ್ಪಣೆ ಕಾರ್ಯಕ್ರಮಗಳ ಮೇಲೆ ಆರೋಗ್ಯ ಇಲಾಖೆ ಕಣ್ಣಿಡಬೇಕಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರಗಳನ್ನು ಬಿಟ್ಟು ಗ್ರಾಮಗಳತ್ತ ಮುಖ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.