ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸಲು ನಿರಂತರ ಶ್ರಮ: ಶ್ರೀರಾಮ ಆಚಂತ

| Published : Feb 09 2024, 01:45 AM IST / Updated: Feb 09 2024, 01:46 AM IST

ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸಲು ನಿರಂತರ ಶ್ರಮ: ಶ್ರೀರಾಮ ಆಚಂತ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಅತ್ಯುತ್ತಮ ಶೈಕ್ಷಣಿಕ ಅವಕಾಶ ಒದಗಿಸಲು ನಮ್ಮ ಅಕಾಡೆಮಿ ನಿರಂತರ ಶ್ರಮಿಸುತ್ತಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ವಿದ್ಯಾರ್ಥಿಗಳ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಅತ್ಯುತ್ತಮ ಶೈಕ್ಷಣಿಕ ಅವಕಾಶ ಒದಗಿಸಲು ನಮ್ಮ ಅಕಾಡೆಮಿ ನಿರಂತರ ಶ್ರಮಿಸುತ್ತಿದೆ ಎಂದು ಶ್ರೀ ಅಕಾಡೆಮಿ ಅಧ್ಯಕ್ಷ, ಸಿಇಒ ಶ್ರೀರಾಮ ಆಚಂತ ಹೇಳಿದರು.

ನಗರದ ಹಾನಗಲ್ಲ ರಸ್ತೆಯ ಶ್ರೀಕಂಠಪ್ಪ ಬಡಾವಣೆಯಲ್ಲಿನ ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ಅನುಭವಗಳನ್ನು ಒದಗಿಸಿ ಅವರ ವೃತ್ತಿ, ತಾಂತ್ರಿಕ ಶಿಕ್ಷಣ ಮತ್ತು ಮೂಲಭೂತ ಕೌಶಲ್ಯ ಪ್ರಾವೀಣ್ಯತೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶ್ರೀ ಅಕಾಡೆಮಿ ಹಗಲಿರುಳು ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಬೆನ್ನೆಲುಬಾಗಿ ನಿಂತು ಅವರ ಭವಿಷ್ಯ ಉಜ್ವಲಗೊಳಿಸುವ ಕನಸು ಹೊಂದಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಸಾಧನೆ ತೋರುವ ಮೂಲಕ ಸಂಸ್ಥೆಗೆ ಕೀರ್ತಿ ತರಬೇಕು ಎಂದರು.

ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿ, ಸವಾಲುಗಳನ್ನು ಎದುರಿಸಿ ಭವಿಷ್ಯವನ್ನು ರೂಪಿಸುವಲ್ಲಿ ನಿರಂತರವಾಗಿ ಪ್ರೇರೇಪಿಸಲಾಗುತ್ತಿದೆ. ಇಂದಿನ ಶಿಕ್ಷಣವು ತುಂಬಾ ದುಬಾರಿಯಾಗಿದ್ದು, ತಮ್ಮ ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಲು ಪಾಲಕರು ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ, ಶ್ರೀ ಅಕಾಡೆಮಿಯ ಪರಿವರ್ತನಾ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕದೊಂದಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಇದು ಮಧ್ಯಮ ವರ್ಗದ ಜನರಿಗೆ ಮಾತ್ರವಲ್ಲದೆ ಬಡ ಮಕ್ಕಳಿಗೂ ಅನುಕೂಲವಾಗಿದೆ ಎಂದರು.

ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ನಟರಾಜ್ ವಿದ್ಯಾರ್ಥಿಗಳ ನಡವಳಿಕೆ ಮತ್ತು ಪೋಷಕರ ಜವಾಬ್ದಾರಿಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ಮತ್ತು ಪರಿಹಾರಗಳನ್ನು ಕಂಡು ಹಿಡಿಯುವ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅರ್ಚನಾ ನವಲೆ, ನಿರ್ದೇಶಕರಾದ ಸಂತೋಷ ನವಲೆ, ಲೇಖಾ ಆಚಂತ, ಸೌಮ್ಯ ಎಸ್‌.ಕೆ. ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.