ಕನ್ನಡಪ್ರಭ ವಾರ್ತೆ ಕಿಕ್ಕೇರಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಶಕ್ತಿ ಮೀರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕ ಎಚ್.ಟಿ.ಮಂಜು ಅವರ ಕೈ ಬಲಪಡಿಸುವಂತೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದರು.

ತುಳಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರಸ್ವಾಮಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದ ಶಾಸಕರು ಅನುದಾನವನ್ನು ಕಷ್ಟಪಟ್ಟು ಪಡೆದು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಇನ್ನಷ್ಟು ಅಭಿವೃದ್ಧಿಗಾಗಿ ಕ್ಷೇತ್ರದ ಜನರು ಶಾಸಕ ಎಚ್.ಟಿ.ಮಂಜು ಕೈ ಬಿಡದೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಎಂದರು.

ತಾನು ಸದಾ ಶಾಸಕರೊಂದಿಗೆ ಇರುತ್ತೇನೆ. ಮುಂದಿನ ದಿನದಲ್ಲಿ ಉತ್ತಮ ಭವಿಷ್ಯ ಸಿಗಲಿದೆ. ಜಿಲ್ಲೆ, ತಾಲೂಕು ಜೆಡಿಎಸ್ ಭದ್ರ ನೆಲೆ ಎಂದು ಸದಾ ಸಾಬೀತುಪಡಿಸಿದ್ದೀರಿ. ನಿಮ್ಮೊಂದಿಗೆ ಕಷ್ಟ ಸುಖಗಳಿಗೆ ಸದಾ ಭಾಗಿಯಾಗುವೆ. ಮುಂದೆ ಖಂಡಿತವಾಗಿಯೂ ತಾಲೂಕು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದರು.

ಜಿಲ್ಲೆಯ ಜನತೆ ದೇಶ ಕಟ್ಟುವ ಕೆಲಸಕ್ಕೆ ಸಹಕಾರ ನೀಡಿ ತಂದೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರಕ್ಕೆ ಕಳಿಸಿಕೊಟ್ಟಿದ್ದೀರಿ. ಜಿಲ್ಲೆಯ ಋಣ ತಮ್ಮಕುಟುಂಬದ ಮೇಲಿದೆ. ಎಂದೂ ಮರೆಯಲಾರೆವು ಎಂದರು.


ಪುರಾತನ ಕಾಲದಿಂದಲೂದೇಗುಲ ನಿರ್ಮಿಸಿ ಪೂಜಿಸುವ ಪರಿಪಾಠವಿದೆ. ಇದನ್ನು ಯುವಕರು ಪಾಲಿಸುತ್ತಿದ್ದಾರೆ. ಇಂದಿನ ಯುವ ಸಮೂಹ ನಮ್ಮ ಹಿರಿಯರು ಹಾಕಿಕೊಟ್ಟಿರುವ ಧಾರ್ಮಿಕ ಪರಂಪರೆಯನ್ನು ಶ್ರದ್ಧಾಭಕ್ತಿಯಿಂದ ಮುಂದುವರೆಯಿಸಿಕೊಂಡು ಹೋಗುತ್ತಿರುವುದು ಆರೋಗ್ಯಕರವಾಗಿದೆ ಎಂದರು.

ಮಾನಸಿಕ ನೆಮ್ಮದಿ, ಶಾಂತಿ, ಒಗ್ಗಟ್ಟಿಗೆ ಇಂತಹ ಸತ್ಕಾರ್ಯಗಳು ಮತ್ತಷ್ಟು ಹಮ್ಮಿಕೊಳ್ಳಬೇಕು. ಎಲ್ಲರ ಒಳಿತಿಗಾಗಿ ಆಧ್ಯಾತ್ಮಿಕ ಚಿಂತನೆ, ಪೂಜಾರಾಧನೆ ಮದ್ದಾಗಿದೆ. ಸಂಕಷ್ಟ ಪರಿಹಾರಕ್ಕಾಗಿ ಪೂಜೆ, ಹೋಮ ಹವನಾದಿಗಳನ್ನು ಪಾಲಿಸಿ ಎಂದರು.

ಸಮಾರಂಭದಲ್ಲಿ ಶಾಸಕರಾದ ಎಚ್.ಟಿ.ಮಂಜು, ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಗೌಡ, ಮುಖಂಡರಾದ ಕೆ.ಬಿ. ಮಧು, ಶೇಖರ್, ಮಲ್ಲೇಶ್, ರಮೇಶ್, ಗ್ರಾಮ ಮುಖಂಡರುಇದ್ದರು.