ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನೀರಿನ ವಿಚಾರದಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ರಾಜಕೀಯ ಮಾಡುತ್ತಿದ್ದಾರೆ. ತಾಲೂಕಿನ ಕೆರೆ-ಕಟ್ಟೆಗಳಿಗೆ ಹೇಮೆ ನೀರು ಹರಿಸದೆ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎಂದು ಸಲ್ಲದ ಅಪಪ್ರಚಾರ ಮಾಡುತ್ತಾ ಕ್ಷೇತ್ರದ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಹೇಮಾವತಿ ಜಲಾಶಯ ಬರಿದಾಗಿದ್ದರೂ ನೀರು ಮತ್ತು ವಿದ್ಯುತ್ ಪೂರೈಕೆ ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಶಾಸಕರ ಕಾರ್ಯವೈಖರಿಯನ್ನು ಖಂಡಿಸಿದರು.
ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಕಾವೇರಿ ಜಲ ವಿವಾದ ಇನ್ನೂ ಮುಗಿದಿಲ್ಲ. ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ಪಾಲಿಸಬೇಕು. ನ್ಯಾಯಾಧೀಕರಣದ ಆದೇಶ ಮೀರಿದರೆ ಕೇಂದ್ರ ಸರ್ಕಾರ ಮಿಲಿಟರಿ ತಂದು ನಮ್ಮ ಅಣೆಕಟ್ಟೆಗಳ ಬೀಗದ ಕೀ ಕಿತ್ತುಕೊಳ್ಳುತ್ತದೆ ಎಂದರು.ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಒಂದಷ್ಟು ಪ್ರಮಾಣದ ನೀರನ್ನು ನೆರೆಯ ತುಮಕೂರು ಜಿಲ್ಲೆಗೆ ಬಿಟ್ಟಿದೆ. ಇದು ಮಾನವೀಯ ನೆಲೆಗಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರ ಎಂದು ತಿಳಿಸಿದರು.
ಎರಡು ಬಾರಿ ತಾಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆ ಗಮನಿಸಿ ಹೇಮಾವತಿ ನದಿ ಹೊರ ಹರಿವನ್ನು ಹೆಚ್ಚಿಸಿದೆ. ಇದರ ಅರಿವಿದ್ದರೂ ಶಾಸಕರು ಸರ್ಕಾರ ಹೇಮೆನಿಂದ ಕೆರೆ ಕಟ್ಟೆ ತುಂಬಿಸುವಲ್ಲಿ ತಾರತಮ್ಯ ಮಾಡಿದೆ ಎಂದು ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಕುಡಿಯುವ ನೀರಿಗೆ ಬರ ಇರುವಾಗ ಬೆಳೆ ರಕ್ಷಣೆಗೆ ನೀರು ಬಿಡಲು ಸಾಧ್ಯವಿಲ್ಲ. ಹೇಮೆ ನೀರು ಬಿಡಲು ಶಾಸಕರು ಸರ್ಕಾರಕ್ಕೆ ಕೇವಲ ಪತ್ರ ಬರೆದರೆ ಸಾಲದು. ವಾಸ್ತವತೆ ನೆಲೆಗಟ್ಟಿನಲ್ಲಿ ಒತ್ತಡ ಹಾಕಬೇಕು. ನೀರಿನ ಸಮಸ್ಯೆಯಿಂದ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಚುನಾವಣೆಗೂ, ಬರ ನಿರ್ವಹಣಾ ಸಮಿತಿ ಸಭೆ ಕರೆದು ಪರಿಶೀಲನೆ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆ ಮುಗಿದಿದ್ದರೂ ಶಾಸಕರು ಇದುವರೆಗೂ ಟಾಸ್ಕ್ ಪೋರ್ಸ್ ಸಭೆ ನಡೆಸಿಲ್ಲ ಎಂದು ದೂರಿದರು.
ಜನರಿಗೆ ಪೂರೈಸುತ್ತಿರುವ ಟ್ಯಾಂಕರ್ ನೀರಿನ ಗುಣಮಟ್ಟ ಪರಿಶೀಲನೆಯಾಗುತ್ತಿಲ್ಲ. ಸರ್ಕಾರ ಶಕ್ತಿ ಮೀರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಶಾಸಕರಾಗಿ ನಿಮ್ಮ ಅಧಿಕಾರ ಬಳಸಿ ಅಧಿಕಾರಿಗಳ ಸಭೆ ಕರೆದು ಜನರ ಕಷ್ಠ ಸುಖಗಳ ಪರಿಹಾರ ಮುಂದಾಗಬೇಕು. ಅದನ್ನು ಬಿಟ್ಟು ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಬಾರದು ಎಂದು ಆಗ್ರಹಿಸಿದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಹೇಮಾವತಿ ಜಲಾಶಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ನಿಯಂತ್ರಣದಲ್ಲಿದೆ. ಸಮಿತಿಯಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೂಡ ಸದಸ್ಯರು. ಹೇಮೆ ನೀರು ಬಿಡುವಲ್ಲಿ ತಾರತಮ್ಯವಾಗಿದ್ದರೆ ಇದನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ನೀರಾವರಿ ಸಚಿವರ ಗಮನಕ್ಕೆ ತರಬೇಕು. ನ್ಯಾಯ ದೊರಕದಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಿಗಾಗಿ ಒತ್ತಾಯ ಮಾಡಬೇಕು. ಅದನ್ನು ಬಿಟ್ಟು ನೀರು ಬಿಟ್ಟು ಕೇವಲ ಪತ್ರ ಬರೆದರೆ ಸಾಲದು ಎಂದು ಸಲಹೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಪಂ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು, ಶೀಳನೆರೆ ಅಂಬರೀಶ್, ಟಿಎಪಿಸಿಎಂಎಸ್ ನಿರ್ದೇಶಕ ಐಚನಹಳ್ಳಿ ಶಿವಣ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪಕ್ಷದ ಪರಿಶಿಷ್ಠ ಜಾತಿ ವಿಭಾಗದ ಮುಖಂಡರಾದ ರಾಜಯ್ಯ, ಬಸ್ತಿ ರಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್ ಇದ್ದರು.