ಸಾರಾಂಶ
ಭಾರತ ಸಂವಿಧಾನ ಅಂಗೀಕಾರಗೊಂಡು ೭೫ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿದ ಚಾಮರಾಜನಗರ ಜಿಲ್ಲೆಯ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರಕ್ಕೆ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ ಭಾರತ ಸಂವಿಧಾನ ಅಂಗೀಕಾರಗೊಂಡು ೭೫ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿದ ಚಾಮರಾಜನಗರ ಜಿಲ್ಲೆಯ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರಕ್ಕೆ ಮೈಸೂರು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿದೆ.
ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುಳಿತಿರುವ ಪ್ರತಿಮೆಯನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಸಂವಿಧಾನ ಪೀಠಿಕೆಯನ್ನು ಪುಸ್ತಕದ ಮಾದರಿಯಲ್ಲಿ ಪ್ರದರ್ಶಿಸಲಾಗಿದೆ. ಬಸವತತ್ವ, ಸಾವಿತ್ರಿ ಜ್ಯೋತಿ ಬಾ ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಸೇರಿದಂತೆ ಜಿಲ್ಲೆಯ ಪ್ರಮುಖ ಕೊಡುಗೆಗಳನ್ನು ಸ್ತಬ್ಧ ಚಿತ್ರದಲ್ಲಿ ಸ್ಮರಿಸಲಾಗಿದೆ. ಸಂವಿಧಾನಿಕ ಹಕ್ಕುಗಳ ಸಂರಕ್ಷಣೆ ಸಂದೇಶ, ವನ್ಯಜೀವಿ ಪ್ರಕೃತಿ ಸಂರಕ್ಷಣೆ ಸಂದೇಶ, ಇನ್ನಿತರ ವೈಶಿಷ್ಟ್ಯಗಳನ್ನು ಸ್ತಬ್ಧ ಚಿತ್ರ ಒಳಗೊಂಡಿದೆ. ಇದರೊಂದಿಗೆ ರಾಜ್ಯ ಸರ್ಕಾರ ಸಾಕಾರಗೊಳಿಸಿದ 5 ಗ್ಯಾರಂಟಿ ಯೋಜನೆಗಳನ್ನು ಸ್ತಬ್ಧ ಚಿತ್ರದಲ್ಲಿ ಪ್ರದರ್ಶಿಸಲಾಗಿದೆ. ಕಳೆದ ಜನವರಿ ೨೬ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಎರಡು ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರಗಳಿಗೆ ಚಾಲನೆ ದೊರೆತು ಜಿಲ್ಲೆಯ ೧೩೦ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಸ್ತಬ್ಧ ಚಿತ್ರ ಸಂಚರಿಸಿದೆ. ನಗರ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ ನೀಡಿ ಜನತೆ ಹಬ್ಬದಂತೆ ಸಂಭ್ರಮಿಸಿದ್ದಾರೆ. ಜನರಿಂದ ಸಂವಿಧಾನ ಜಾಗೃತಿಗೆ ಅಭೂತಪೂರ್ವ ಬೆಂಬಲ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮೈಸೂರು ವಿಭಾಗ ಮಟ್ಟದಲ್ಲಿ ಚಾಮರಾಜನಗರ ಜಿಲ್ಲೆಯ ಸಂವಿಧಾನ ಜಾಗೃತಿ ಸ್ತಬ್ಧ ಚಿತ್ರ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದ್ದು, ಇದಕ್ಕೆ ಶ್ರಮಿಸಿದ ಜಿಲ್ಲೆಯ ಜಿಲ್ಲಾಧಿಕಾರಿಯ ಶಿಲ್ಪಾ ನಾಗ್, ಜಿಪಂ ಸಿಇಒ ಆನಂದ್‌ಪ್ರಕಾಶ್ ಮೀನಾ, ಉಪಕಾರ್ಯದರ್ಶಿ ಪಿ.ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.