ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಭಾರತ ಹಿಂದಿನಿಂದಲೂ ಮಾನವೀಯತೆ, ಸಂಸ್ಕೃತಿ, ಮೌಲ್ಯಯುತ ಜೀವನಕ್ಕೆಆದರ್ಶವಾದ ದೇಶ. ಸ್ವತಂತ್ರ ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯ ಬದುಕು ನಡೆಸಲು ಅವಕಾಶ ಕಲ್ಪಿಸಿದೆ ಎಂದು ವಿಧಾನ ಸಭಾಪತಿ ಯು.ಟಿ.ಖಾದರ್ ಹೇಳಿದ್ದಾರೆ.ಇಲ್ಲಿನ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ , ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಲಿಷ್ಠ ಭಾರತ ನಿರ್ಮಾಣ ಸಶಕ್ತ ವಿದ್ಯಾರ್ಥಿ ಸಮುದಾಯದ ದೃಢ ಸಂಕಲ್ಪದಿಂದ ಸಾಧ್ಯ. ಬಲಿಷ್ಠ ವಿದ್ಯಾರ್ಥಿ ಸಮುದಾಯದ ಕಲ್ಪನೆ ರಾಷ್ಟ್ರ ಭಕ್ತಿಯ ಬದ್ಧತೆಯುಳ್ಳ ಶಿಕ್ಷಣ ಸಂಸ್ಥೆಯಿಂದ ಸಾಕಾರಗೊಳ್ಳುತ್ತದೆ ಎಂದರು.ಕಾಲೇಜಿನ ಆವರಣದಲ್ಲಿ ನೂತನವಾಗಿ ಸ್ಥಾಪನೆಯಾದ ೨೨೫ ಕಿ.ವಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆ ನೆರವೇರಿಸಿದ ಅದಮ್ಯ ಚೇತನ ಫೌಂಡೇಶನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಜಾಗತಿಕ ತಾಪಮಾನದ ಅತಿರೇಕದಲ್ಲಿ ವಾತಾವರಣದ ಧನಾತ್ಮಕ ಬದಲಾವಣೆಗೆ ಇಂತಹ ಕಾಯಕಲ್ಪಗಳ ಅಗತ್ಯತೆ ಹೆಚ್ಚಿದೆಎಂದರು.
ಎಕ್ಸಲೆಂಟ್ ಸಂಸ್ಥೆಯ ಪ್ರಸಕ್ತ ವರ್ಷದ ಸಸ್ಯ ಶ್ಯಾಮಲಾ ಅಭಿಯಾನದ ಒಂದು ಸಾವಿರನೇ ಗಿಡ ನೆಡುವ ಮೂಲಕ ಗಿಡ ನೆಡುವ ಅಭಿಯಾನದಲ್ಲಿ ಸಹಸ್ರ ಸಸಿ ನೆಟ್ಟ ಪೂರ್ಣತೆಯನ್ನು ಅವರು ಘೋಷಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ ಸ್ವಾತಂತ್ರ್ಯದ ಸವಿನೆನಪಿನಲ್ಲಿ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ಹೆಚ್ಚು ಯೋಚಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್, ಶಿಕ್ಷಣವೇ ದೊಡ್ಡ ಆಸ್ತಿ. ಶೈಕ್ಷಣಿಕ ಸಾಧಕನಿಗೆ ಸಮಾಜದಿಂದ ಬಹು ದೊಡ್ಡ ಮನ್ನಣೆ ದೊರಕುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಸ್ವಾಗತಿಸಿದರು. ಪ್ರಾಕೃತಿಕ ಸಂಪತ್ತನ್ನು ಪೋಷಿಸುವ ಸಂಸ್ಥೆಯ ಕಾಯಕಲ್ಪದಡಿ ‘ಸಸ್ಯ ಶ್ಯಾಮಲಾ’ ಬೃಹತ್ ಅಭಿಯಾನ ಕುರಿತು ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಿವರಿಸಿದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ ಮತ್ತು ಸಿಇಟಿ ಪರಿಕ್ಷೆಗಳಲ್ಲಿ ಸಾಧಕ ಸಂಸ್ಥೆಯ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದ ಜೊತೆಗೆ ಸಮ್ಮಾನಿಸಲಾಯಿತು.ಸಂಸ್ಥೆಯ ವಾರ್ಷಿಕ ಸಂಚಿಕೆ ಮೌಲ್ಯ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.
ಚೌಟರ ಅರಮನೆಯ ಕುಲದೀಪ್ ಎಂ., ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ, ಸಿಬಿಎಸ್ಸಿ ಪ್ರಾಂಶುಪಾಲ ಸುರೇಶ್ ಇದ್ದರು.ಉಪನ್ಯಾಸಕಿ ಜಯಲಕ್ಷಿ, ವಿಲ್ಮಾ, ರೋಡ್ರಿಗಸ್, ವೇಲಂಟೈನಾ ಮಿರಾಂಡಾ ಸಮ್ಮಾನಿತ ವಿದ್ಯಾರ್ಥಿಗಳ ಸಾಧನೆ ವಿವರಿಸಿದರು.
ಡಾ. ವಾದಿರಾಜ ಕಲ್ಲೂರಾಯ ಮತ್ತು ನಿರಂಜನ್ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು. ಉಪನ್ಯಾಸಕ ವಿಕ್ರಮ್ ನಾಯಕ್ , ರೇಣುಕಾಚಾರ್ಯ ಕಾರ್ಯಕ್ರಮ ನಿರೂಪಿಸಿದರು