ಸಾರಾಂಶ
ಡಿಸಿಎಂ ಡಿ.ಕೆ ಶಿವಕುಮಾರ್ ರವರು ಶೇ.4ರಷ್ಟು ಧಾರ್ಮಿಕ ಮೀಸಲಾತಿಗಾಗಿ ಸಂವಿಧಾನವನ್ನೇ ಬದಲಾಯಿಸುವ ಹಾಗೂ ಸಂವಿಧಾನಕ್ಕೆ ತಿದ್ದುಪಡಿ ತರುವ ಹೇಳಿಕೆ ನೀಡಿರುವುದು ಖಂಡನೀಯ ಎಂದು ನಗರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಕನ್ನಡಪ್ರಭ ವಾರ್ತೆ ಕನಕಪುರ
ಡಿಸಿಎಂ ಡಿ.ಕೆ ಶಿವಕುಮಾರ್ ರವರು ಶೇ.4ರಷ್ಟು ಧಾರ್ಮಿಕ ಮೀಸಲಾತಿಗಾಗಿ ಸಂವಿಧಾನವನ್ನೇ ಬದಲಾಯಿಸುವ ಹಾಗೂ ಸಂವಿಧಾನಕ್ಕೆ ತಿದ್ದುಪಡಿ ತರುವ ಹೇಳಿಕೆ ನೀಡಿರುವುದು ಖಂಡನೀಯ ಎಂದು ನಗರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.ಈ ಬಗ್ಗೆ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿ, ಭಾರತ ದೇಶಕ್ಕೆ ದಿಕ್ಸೂಚಿ ಸಂವಿಧಾನ. ಬಹುತ್ವ ಭಾರತಕ್ಕೆ ಆಸರೆಯಾದ ಸಂವಿಧಾನದ ತಿರುಳನ್ನು ಅರಿಯದ ಕೆಲವು ರಾಜಕಾರಣಿಗಳು, ಸಂಸತ್ ಸದಸ್ಯರು, ಮುಖ್ಯಮಂತ್ರಿ, ಸಚಿವರು, ನ್ಯಾಯಾಧಿಪತಿಗಳು ಸಂವಿಧಾನವನ್ನೇ ಗುರಿಯಾಗಿಸಿಕೊಂಡು ಸಂವಿಧಾನ ಬದಲಾವಣೆ, ಪರಾಮರ್ಶೆ, ತಿದ್ದುಪಡಿ ಎಂದು ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಇದು ಸಂವಿಧಾನ ವಿರೋಧಿ, ದೇಶದ್ರೋಹದ ಚಟುವಟಿಕೆಯಾಗಿದೆ ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಕಿಡಿಕಾರಿದ್ದಾರೆ.
ಸಂವಿಧಾನದ ಮೇಲೆ ಅಧಿಕಾರಕ್ಕೆ ಬಂದಿರುವ ಯಾವುದೇ ಸರ್ಕಾರಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಸಂವಿಧಾನವನ್ನು ಬದಲಿಸುವ ಹಕ್ಕು, ಮಾರ್ಪಡಿಸುವ ಹಕ್ಕು, ತಿದ್ದುಪಡಿ ಮಾಡುವ ಹಕ್ಕು ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಮೀಸಲಾತಿ ಬಗ್ಗೆ ಮಾತನಾಡುವಾಗ ಮೈ ಮೇಲೆ ಎಚ್ಚರವಿರಬೇಕು. ಈ ಹಿನ್ನೆಲೆಯಲ್ಲಿ ಸಂವಿಧಾನದ ಚೌಕಟ್ಟಿನ ಒಳಗೆ ಮಾತ್ರ ಯಾವುದೇ ಚರ್ಚೆ, ವಿಷಯ ಗಳನ್ನು ಮಾತನಾಡಬೇಕೆ ಹೊರತು, ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟುಮಾಡುವ ವಿಚಾರಗಳನ್ನು ತರಬಾರದು. ಅದಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಂದು ಕಾಯ್ದೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.