ತರೀಕೆರೆಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕಿದೆ. ಅವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ. ಅವರ ಹೆಸರು ಅಜರಾಮರ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ತಿಳಿಸಿದರು.

- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕಿದೆ. ಅವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ. ಅವರ ಹೆಸರು ಅಜರಾಮರ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ತಿಳಿಸಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಾಲ್ಯದಿಂದ ಜೀವನದ ಉದ್ದಕ್ಕೂ ಅಪಾರ ಅವಮಾನ, ಶೋಷಣೆ ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ಸಾಧನೆ ಎಂದಿಗೂ ಜೀವಂತ ಎಂದು ತಿಳಿಸಿದರು.ತಹಸೀಲ್ದಾರ್ ಎಚ್.ಜೆ.ರಶ್ಮಿ ಮಾತನಾಡಿ, ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದ್ದು, ಸ್ವತಂತ್ರವಾಗಿ ಬದುಕುವ ಅವಕಾಶ ಒದಗಿಸಿದೆ ಎಂದು ತಿಳಿಸಿದರು.ಭದ್ರಾವತಿ ಆಕಾಶವಾಣಿ ಹಿರಿಯ ಉದ್ಘೋಷಕರಾದ ಎಂ.ಕೆ.ಶಿವಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ ಹೊಡೆದೋಡಿಸಲು ಜೀವನ ಪರ್ಯಂತ ಹೋರಾಟ ನಡೆಸಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಋಣ ನಾವು ತೀರಿಸುತ್ತಿಲ್ಲ, ಅವರ ಆದರ್ಶ ಪಾಲಿಸುತ್ತಿಲ್ಲ ಎಂಬ ನೋವಿದೆ. ಅಂಬೇಡ್ಕರ್ ಅವರನ್ನು ವಿಶ್ವನಾಯಕ ಎಂದು ಒಪ್ಪಿಕೊಂಡಿರುವಾಗ ನಮ್ಮ ದೇಶದಲ್ಲಿ ಮಾತ್ರ ಕೇವಲ ದಲಿತರ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು.

ಡಿಎಸ್‌ಎಸ್ ರಾಜ್ಯಸಂಚಾಲಕ ಎನ್.ವೆಂಕಟೇಶ್ ಅವರು ಉಪನ್ಯಾಸ ನೀಡಿ ಮಾತನಾಡಿ, ಡಾ.ಬಾಬು ಜಗಜೀವನ್‌ರಾಂ ಸುಮಾರು 30 ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ್ದು, ಹಲವು ಇಲಾಖೆಗಳಲ್ಲಿ ಸಾಕಷ್ಟು ಸುಧಾರಣೆ ತರಲು ಅವಿರತ ಶ್ರಮಿಸಿದ್ದಾರೆ ಎಂದು ತಿಳಿಸಿದರು.ಎಸ್‌ಎಲ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿದರು. ಡಿವೈಎಸ್‌ಪಿ ಎಚ್.ಪರಶುರಾಮಪ್ಪ, ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್, ಡಾ.ಚಂದ್ರಶೇಖರ್, ಸಿಡಿಪಿಒ ಚರಣ್‌ರಾಜ್, ಪಿಆರ್‌ಇಡಿ ಎಇಇ ವಿನೋದ್, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯತಿರಾಜ್, ಆರ್‌ಎಫ್‌ಒ ಗಳಾದ ಆಸಿಫ್‌ಅಹಮದ್, ರಾಘವೇಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

14ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ 135ನೇ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆಯನ್ನು ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ದೇವೇಂದ್ರಪ್ಪ ಉದ್ಘಾಟಿಸಿದರು. ತಹಸೀಲ್ದಾರ್‌ ಎಚ್.ಜೆ.ರಶ್ಮಿ, ಪುರಸಭೆ ಮುಖ್ಯಾಧಿಕಾರಿ ಸಿ.ಎಸ್. ಮಂಜುನಾಥ್, ಭದ್ರಾವತಿ ಆಕಾಶವಾಣಿ ಹಿರಿಯ ಉದ್ಘೋಷಕ ಎಂ.ಕೆ.ಶಿವಕುಮಾರ್, ಡಿಎಸ್‌ಎಸ್ ರಾಜ್ಯಸಂಚಾಲಕ ಎನ್.ವೆಂಕಟೇಶ್ ಮತ್ತಿತರರು ಇದ್ದರು.