ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಸಂವಿಧಾನ ದಿನಾಚರಣೆ ಪ್ರಯುಕ್ತ 26ರಿಂದ 22 ದಿನಗಳ ಕಾಲ ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥ ಅಭಿಯಾನ ಸಂಬಂಧ ವಿವಿಧ ಸಮಾಜದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂವಿಧಾನ ದಿನಾಚರಣೆ ಪ್ರಯುಕ್ತ 26ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಲಿದ್ದಾರೆ. 27ರಿಂದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಅಭಿಯಾನ ನಡೆಯಲಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸವುದು ಸಂವಿಧಾನದ ಅತಿ ಮುಖ್ಯ ಆಶಯವಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿ, ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಹೋಬಳಿವಾರು ನೋಡಲ್ ಅಧಿಕಾರಿಗಳು ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆಯಾಯ ಗ್ರಾ.ಪಂ.ಗೆ ಬಂದಾಗ ಸ್ಥಳೀಯ ಪ್ರಮುಖರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗತ್ಯ ಸಹಕಾರ ನೀಡುವಂತೆ ಕೋರಿದರು.
ನೋಡಲ್ ಅಧಿಕಾರಿಗಳ ಜೊತೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಜಾಥ ಸಂದರ್ಭದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಗತ್ಯ ಮಾಹಿತಿ ನೀಡುವುದು, ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು, ಶಾಲಾ-ಕಾಲೇಜು ಇತರರನ್ನು ಆಹ್ವಾನಿಸುವುದು, ಈ ಬಗ್ಗೆ ಪೂರ್ವಭಾವಿಯಾಗಿ ಸ್ಥಳೀಯರೊಂದಿಗೆ ಚರ್ಚೆ ನಡೆಸುವುದು, ಸಂವಿಧಾನ ಜಾಗೃತಿ ಸಂಬಂಧಿಸಿದಂತೆ ಸ್ಥಳೀಯ ಶಾಲಾ-ಕಾಲೇಜು ಮುಖ್ಯಸ್ಥರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ರಸಪ್ರಶ್ನೆ, ಪ್ರಬಂಧ, ಸಂಗೀತ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳೀಯ ಕಲೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ‘ಸ್ತಬ್ಧಚಿತ್ರ’ ಮೂಲಕ ಸಂವಿಧಾನದ ಜಾಗೃತಿ ಜಾಥಾ ಸಂದರ್ಭದಲ್ಲಿ ಸ್ಥಳೀಯ ಭಾಷಣಕಾರರನ್ನು ಆಹ್ವಾನಿಸಿ ಮಾಹಿತಿ ನೀಡಲಾಗುತ್ತದೆ ಎಂದು ಶೇಖರ್ ಮಾಹಿತಿ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಿವಾಕರ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಸಂವಿಧಾನ ಪೀಠಿಕೆ ವಾಚನ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ, ಶಾಲಾ ದಿನಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ‘ಸಂವಿಧಾನ ಪೀಠಿಕೆ’ ವಾಚಿಸುವಂತಾಗಬೇಕು ಎಂದು ಸಲಹೆ ಮಾಡಿದರು.ಶಿಕ್ಷಣಾಧಿಕಾರಿ ಮಹದೇವಸ್ವಾಮಿ ಅವರು ಈಗಾಗಲೇ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಸಹ ವಾಚಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಖಾಲಿದ್ ಮಾತನಾಡಿ, ಸಂವಿಧಾನ ಜಾಗೃತಿ ಜಾಥ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತಾಗಬೇಕು. ವೀಡಿಯೋ ಕ್ಲಿಪ್ ಗಳನ್ನು ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದರು.ವೀರೇಂದ್ರ ಮಾತನಾಡಿ, ಶಾಲಾ ಮಕ್ಕಳಲ್ಲಿ ಸಂವಿಧಾನ ಪೀಠಿಕೆ ಮಹತ್ವವನ್ನು ತಿಳಿಸಬೇಕು. ಸಂವಿಧಾನ ಜಾಗೃತಿ ಜಾಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಪಾಲ್ಗೊಳ್ಳುವಂತಾಗಬೇಕು ಎಂದು ಕೋರಿದರು.
ಪ್ರಮುಖರಾದ ಎಸ್.ಎಂ.ಚಂಗಪ್ಪ, ಗಂಗಾಧರ, ಚಂದ್ರಪ್ರಸಾದ್, ಸಂತೋಷ್, ರಮೇಶ್, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಕುಡಿಯುವ ನೀರು ವಿಭಾಗದ ಎಂಜಿನಿಯರ್ ಸುರೇಶ್ ಕುಮಾರ್, ಪಿ.ಎಂಜಿಎಸ್‌ವೈ ಎಂಜಿನಿಯರ್ ಪ್ರಭು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ, ಬಿಸಿಎಂ ಇಲಾಖೆ ಅಧಿಕಾರಿ ಎನ್.ಮಂಜುನಾಥ್, ಜಿಲ್ಲಾ ನೋಂದಾಣಾಧಿಕಾರಿ ಸಿದ್ದೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ದಿವಾಕರ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರುಪಾಕ್ಷ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಚಂದ್ರಕುಮಾರ್, ಇತರರು ಇದ್ದರು.ಜಾಗೃತಿ ಅಭಿಯಾನ ಕಾರ್ಯಕ್ರಮ ಪಟ್ಟಿ:
ಮಡಿಕೇರಿ ತಾಲೂಕಿನಲ್ಲಿ ಜ.27ರಂದು ಪೆರಾಜೆ, ಚೆಂಬು, ಸಂಪಾಜೆ, ಮದೆ, ಮೇಕೇರಿ ಗ್ರಾಮಗಳಲ್ಲಿ ಜಾಥಾ ಸಂಚರಿಸಲಿದೆ.28ರಂದು ಬೆಟ್ಟಗೇರಿ, ಚೇರಂಬಾಣೆ, ಕುಂದಚೇರಿ, ಕರಿಕೆ, ಜನವರಿ, 29 ರಂದು ಭಾಗಮಂಡಲ, ಅಯ್ಯಂಗೇರಿ, ಬಲ್ಲಮಾವಟಿ, ಎಮ್ಮೆಮಾಡು, ನಾಪೋಕ್ಲು, 30ರಂದು ಕುಂಜಿಲ ಕಕ್ಕಬ್ಬೆ, ನರಿಯಂದಡ, ಕೊಣಂಜಗೇರಿಪಾರಾಣೆ, ಹೊದ್ದೂರು, ಮೂರ್ನಾಡು, ಜನವರಿ, 31 ರಂದು ಹಾಕತ್ತೂರು, ಮರಗೋಡು, ಹೊಸ್ಕೇರಿ, ಕಡಗದಾಳು, ಕೆ.ನಿಡುಗಣೆ, ೆಫೆ.1ರಂದು ಗಾಳಿಬೀಡು, ಮಕ್ಕಂದೂರು.
ಫೆ.1ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಕೆದಕಲ್, ಚೆಟ್ಟಳ್ಳಿ, ಫೆ.2 ರಂದು ಸುಂಟಿಕೊಪ್ಪ, ಹರದೂರು, ಮಾದಪುರ, ಗರ್ವಾಲೆ, ಕಿರಗಂದೂರು ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ.ಫೆ.3ರಂದು ಐಗೂರು, ಬೇಲೂರು, ತೋಳೂರು ಶೆಟ್ಟಳ್ಳಿ, ಬೆಟ್ಟದಳ್ಳಿ, ಶಾಂತಳ್ಳಿ, 4ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಹಾನಗಲ್ಲು, ಚೌಡ್ಲು, ದೊಡ್ಡಮಳ್ತೆ, ಗೌಡಳ್ಳಿ ಇಲ್ಲಿ ಅಭಿಯಾನ ನಡೆಯಲಿದೆ.
ಫೆ.5ರಂದು ಬೆಸ್ಸೂರು, ಕೊಡ್ಲಿಪೇಟೆ, ಬ್ಯಾಡಗೊಟ್ಟ, ಹಂಡ್ಲಿ, ಶನಿವಾರಸಂತೆ, 6ರಂದು ದುಂಡಳ್ಳಿ, ನಿಡ್ತ, ಆಲೂರು ಸಿದ್ದಾಪುರ, ಗಣಗೂರು, ನೇರುಗಳಲೆ. 7ರಂದು ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಇಲ್ಲಿ ಅಭಿಯಾನ ನಡೆಯಲಿದೆ.ಫೆ.8ರಂದು ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಗುಡ್ಡೆಹೊಸೂರು, 9 ರಂದು ಕುಶಾಲನಗರ ಪುರಸಭೆ, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ನೆಲ್ಲಿಹುದಿಕೇರಿ,
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಫೆ.10 ರಂದು ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, 11ರಂದು ಹೊಸೂರು, ಕಾರ್ಮಾಡು, ಅಮ್ಮತ್ತಿ, ಕಣ್ಣಂಗಾಲ, ಹಾಲುಗುಂದ, 12 ರಂದು ಬಿಳುಗುಂದ, ಚೆಂಬೆಳ್ಳೂರು, ಕಾಕೋಟು ಪರಂಬು, ಕದನೂರು, ಕೆದಮುಳ್ಳೂರು, 13 ರಂದು ವಿರಾಜಪೇಟೆ ಪುರಸಭೆ, ಬೇಟೋಳಿ, ಆರ್ಜಿ, ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, 14 ರಂದು ಹಾತೂರು, ಗೋಣಿಕೊಪ್ಪಲು, ಅರುವತ್ತೋಕ್ಲು, ಪೊನ್ನಂಪೇಟೆ, ಕಿರುಗೂರು, 15 ರಂದು ಹುದಿಕೇರಿ, ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಮತ್ತು ಕುಟ್ಟ ಗ್ರಾಮದಲ್ಲಿ ಜಾಥಾ ನಡೆಯಲಿದೆ.ಫೆ.16 ರಂದು ಕೆ.ಬಾಡಗ, ನಾಲ್ಕೇರಿ, ಕಾನೂರು, ಬಲ್ಯಮಂಡೂರು, ನಿಟ್ಟೂರು, 17ರಂದು ಬಾಳಲೆ, ಪೊನ್ನಪ್ಪಸಂತೆ, ಮಾಯಮುಡಿ, ದೇವರಪುರ, ತಿತಿಮತಿ, ಈ ಪ್ರದೇಶಗಳಲ್ಲಿ ಸಂವಿಧಾನ ಜಾಗೃತಿ ಅಭಿಯಾನ ನಡೆಯಲಿದೆ.