26ರಂದು ಸಂವಿಧಾನ ಜಾಗೃತಿ ಜಾಥಾ

| Published : Jan 24 2024, 02:01 AM IST

ಸಾರಾಂಶ

ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು “ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳು ಮತ್ತು 6 ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜ. 26 ರಿಂದ ಫೆಬ್ರವರಿ 25 ರವರೆಗೆ ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳು ಮತ್ತು 6 ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸರ್ಕಾರೇತರ ಸಂಸ್ಥೆಗಳು, ವಿವಿಧ ಸಂಘಟನೆಗಳು ಪೂರ್ಣ ಸಹಕಾರ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ “ಸಂವಿಧಾನ ಜಾಗೃತಿ ಜಾಥಾ” ಸಮಾವೇಶದ ಪೂರ್ವಭಾವಿ ಸಿದ್ದತೆಗಳ ಕುರಿತು ಅವರಿಂದ ಸಲಹೆಗಳನ್ನು ಆಲಿಸಿ ನಂತರ ಮಾತನಾಡಿ, ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು “ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಆಯೋಜಿಸಲಾಗಿದೆ ಎಂದರು.

ಫಂ.25ರ ವರೆಗೆ ಅಭಿಯಾನ

ಜಿಲ್ಲಾ ಕೇಂದ್ರದಲ್ಲಿ ಅಂದು ಸರ್‌ ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಕಾರ್ಯಕ್ರಮದ ಜಾಗೃತಿ ಜಾಥಾಗೆ ಚಾಲನೆ ನೀಡಲಿದ್ದಾರೆ. ನಂತರ ಈ ಜಾಥಾ ಕಾರ್ಯಕ್ರಮವು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ನಗರಾಡಳಿತ ಪ್ರದೇಶಗಳಲ್ಲಿ ಮುಂದಿನ ಫೆಬ್ರವರಿ 25 ವರೆಗೆ ಜರುಗಲಿದೆ ಎಂದರು.

ಪ್ರತಿ ಜಿಲ್ಲೆಗಳಲ್ಲಿ ಜನವರಿ 26 ರಂದು ಚಾಲನೆಗೊಳ್ಳಲಿರುವ ಈ ಜಾಗೃತಿ ಜಾಥಾದ ಮೆರವಣಿಗೆಯು ಮುಂದಿನ ಫೆಬ್ರವರಿ 25 ರಂದು ಬೆಂಗಳೂರಿಗೆ ತಲುಪಿ ಅರಮನೆ ಮೈದಾನದಲ್ಲಿ ನಡೆಯವ "ಸಂವಿಧಾನ ಜಾಗೃತಿ ಜಾಥಾದ ರಾಷ್ಟೀಯ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಆಗಲಿದೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಭಾರತದ ಸಂವಿಧಾನ ಪೀಠಿಕೆಯ ಪ್ರತಿಗಳನ್ನು ಮೆರವಣಿಗೆಯ ಉದ್ದಕ್ಕೂ ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಎಸ್ಪಿ ಡಿ.ಎಲ್.ನಾಗೇಶ್, ಅಪರ ಡೀಸಿ ಡಾ.ಎನ್.ತಿಪ್ಪೇಸ್ವಾಮಿ, ಎಸಿ ಡಿ.ಹೆಚ್. ಅಶ್ವಿನ್, ಜಿಪಂ ಉಪಕಾರ್ಯದರ್ಶಿ ಡಾ.ಎನ್. ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಸಿಕೆಬಿ-6 ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಮಾವೇಶ ಕುರಿತು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದರು.