19ರಿಂದ ಮುಂಡರಗಿ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ-ಯಲಿವಾಳ

| Published : Feb 13 2024, 12:46 AM IST

19ರಿಂದ ಮುಂಡರಗಿ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ-ಯಲಿವಾಳ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ಡಿ. 26ರಿಂದ ಪ್ರಾರಂಭವಾದ ಸಂವಿಧಾನ ಜಾಗೃತಿ ಜಾಥಾ ಫೆ. 19ರಂದು ಮುಂಡರಗಿ ತಾಲೂಕಿಗೆ ಆಗಮಿಸಲಿದ್ದು, ಫೆ. 23ರ ವರೆಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ನೀಡಲಿದೆ.

ಮುಂಡರಗಿ: ರಾಜ್ಯಾದ್ಯಂತ ಡಿ. 26ರಿಂದ ಪ್ರಾರಂಭವಾದ ಸಂವಿಧಾನ ಜಾಗೃತಿ ಜಾಥಾ ಫೆ. 19ರಂದು ಮುಂಡರಗಿ ತಾಲೂಕಿಗೆ ಆಗಮಿಸಲಿದ್ದು, ಫೆ. 23ರ ವರೆಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸುವ ಮೂಲಕ ಸಂವಿಧಾನದ ಕುರಿತು ಜಾಗೃತಿ ನೀಡಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಹೇಳಿದರು. ಅವರು ಸೋಮವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಾಥಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಜಾಥಾ ಮೆರವಣಿಗೆಯನ್ನು ಅತ್ಯಂತ ಸಡಗರದಿಂದ ಸ್ಥಳೀಯ ವಿವಿಧ ಕಲಾ ತಂಡಗಳನ್ನು ಕೂಡಿಸಿಕೊಂಡು ಅವರ ಕಲಾ ಪ್ರದರ್ಶ ಮಾಡಿಸಲಾಗುವುದು. ಜೊತೆಗೆ ಗ್ರಾಮವನ್ನು ಸ್ವಚ್ಛಗೊಳಿಸಿ, ನೀರು ಹೊಡೆಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಿಸಿ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಜಾಥಾದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು, ಸರ್ವ ಸಮಾಜದವರು, ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು, ಶಾಲಾ ಕಾಲೇಜುಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಯವರು ಪಾಲ್ಗೊಳ್ಳಲಿದ್ದಾರೆ. ಫೆ. 19ರಂದು ಬೆಳಗ್ಗೆ 11ಕ್ಕೆ ಬಾಗೇವಾಡಿ ಗ್ರಾಮಕ್ಕೆ ಆಗಮಿಸಲಿದ್ದು, ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಮುರುಡಿ ಗ್ರಾಮ, ಮಧ್ಯಾಹ್ನ 2.30ಕ್ಕೆ ಬಿದರಹಳ್ಳಿ ಗ್ರಾಮ, ಸಾಯಂಕಾಲ 4.30ಕ್ಕೆ ಹಮ್ಮಿಗಿ, ಸಾಯಂಕಾಲ 6ಕ್ಕೆ ಸಿಂಗಟಾಲೂರು ಗ್ರಾಮಕ್ಕೆ ಜಾಥಾ ಆಗಮಿಸಲಿದೆ. ಫೆ. 20ರಂದು ಬೆಳಗ್ಗೆ 9.30ಕ್ಕೆ ಕೊರ್ಲಹಳ್ಳಿ, ಮಧ್ಯಾಹ್ನ 12.30ಕ್ಕೆ ಬಿಡನಾಳ, ಮಧ್ಯಾಹ್ನ 2.30ಕ್ಕೆ ಕಲಕೇರಿ, ಸಾಯಂಕಾಲ 4.30ಕ್ಕೆ ಹಾರೋಗೇರಿ, ಸಂಜೆ 6ಕ್ಕೆ ಹಿರೇವಡ್ಡಟ್ಟಿ ಗ್ರಾಮಕ್ಕೆ ಜಾಥಾ ಆಗಮಿಸಲಿದೆ. ಫೆ. 21ರಂದು ಬೆಳಗ್ಗೆ 9.30ಕ್ಕೆ ಡಂಬಳ ಗ್ರಾಮಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 12.30ಕ್ಕೆ ಡೋಣಿ, ಮಧ್ಯಾಹ್ನ 2.30ಕ್ಕೆ ಶಿವಾಜಿನಗರ, ಸಾಯಂಕಾಲ 4.30ಕ್ಕೆ ಕದಾಂಪುರ, ಸಂಜೆ 6 ಕ್ಕೆ ಜಂತ್ಲಿ-ಶಿರೂರ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಲಿದೆ. ಫೆ. 22ರಂದು ಬೆಳಗ್ಗೆ 9.30ಕ್ಕೆ ಹಳ್ಳಿಕೇರಿ, ಮಧ್ಯಾಹ್ನ 12.30ಕ್ಕೆ ಪೇಟಾಲೂರು, ಮಧ್ಯಾಹ್ನ 2.30ಕ್ಕೆ ಮೇವುಂಡಿ, ಸಾಯಂಕಾಲ 4 ಗಂಟೆಗೆ ಹೆಸರೂರು ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಲಿದೆ. ಪ್ರತಿ 5 ಗ್ರಾಮ ಪಂಚಾಯಿತಿಗೆ ಇಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಥಾ ಬಂದು ಹೋಗುವವರೆಗೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲಿದ್ದಾರೆ.ಫೆ. 23ರಂದು ಬೆಳಗ್ಗೆ 10 ಗಂಟೆಗೆ ಮುಂಡರಗಿ ಪಟ್ಟಣಕ್ಕೆ ಜಾಥಾ ಆಗಮಿಸಲಿದೆ. ಪಟ್ಟಣದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ನಂತರ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ. ತಾಲೂಕಿನಾದ್ಯಂತ ಎಲ್ಲ ಗ್ರಾಪಂ ವ್ಯಾಪ್ತಿಯ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸಬೇಕು ಎಂದರು.