ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಫೆ.15 ರಿಂದ 18ವರೆಗೆ ತಾಲೂಕಿನಾದ್ಯಂತ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾಗೆ ಎಲ್ಲರೂ ಸಹಕರಿಸುವಂತೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜರುಗಿದ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ-15 ರಿಂದ 18ವರೆಗೆ ತಾಲೂಕಿನಾದ್ಯಂತ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾ ಸಂಚಾರ ವಾಹನದ ರೂಟ್ ಮ್ಯಾಪ್ ತಯಾರಿಸಲಾಗಿದೆ. ಸಿಂದಗಿ ತಾಲೂಕಿನಿಂದ ಫೆ.15 ರಂದು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಹರನಾಳ ಗ್ರಾಮದಲ್ಲಿ ಅದ್ಧೂರಿ ಸ್ವಾಗತದೊಂದಿಗೆ ಚಿಕ್ಕರೂಗಿ, ಮುಳಸಾವಳಗಿ ಮೂಲಕ ಫೆ.16ರಂದು ಬೆಳಗ್ಗೆ 8ಗಂಟೆಗೆ ದೇವರಹಿಪ್ಪರಗಿ ಪಟ್ಟಣಕ್ಕೆ ಆಗಮಿಸಲಿದೆ ನಂತರ ಮಾರ್ಕಬ್ಬಿನಳ್ಳಿ, ಸಾತಿಹಾಳ, ಯಾಳವಾರ ಮಣ್ಣೂರ ಹಾಗೂ ಫೆ.17ರಂದು ಜಾಲವಾದ, ಕೊಂಡಗೂಳಿ, ಕೋರವಾರ, ಕೆರೂಟಗಿ, ಯಲಗೋಡ ಹಾಗೂ ಫೆ.18 ರಂದು ರಾತ್ರಿ ಹುಣಶ್ಯಾಳ ಗ್ರಾಮ ಪಂಚಾಯತಿಗಳ ಮೂಲಕ ಸಂಚರಿಸಿ ಬೆಳಗ್ಗೆ ತಾಳಿಕೋಟಿ ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಎಲ್ಲರ ಸಹಕಾರದೊಂದಿಗೆ ಸಂವಿಧಾನ ಆಶಯಗಳ ಕುರಿತು ಜಾಗೃತಿ ಮೂಡಿಸಲಿದೆ. ಜಾಥಾ ಯಶಸ್ವಿಯಾಗಲು ಎಲ್ಲರ ಸಹಭಾಗಿತ್ವ ಬಹು ಮುಖ್ಯವಾಗಿದೆ. ಅಧಿಕಾರಿಗಳು ಅಗತ್ಯವಾದ ಸಿದ್ಧತೆಯಲ್ಲಿರಬೇಕು ಹಾಗೂ ಸ್ಥಳೀಯ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿ ಸಂಘಟನೆಯ ಪದಾಧಿಕಾರಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೆಪಿಸಬೇಕು. ಜನಾಕರ್ಷಣೆಗೆ ವಿವಿಧ ಜಾನಪದ ಕಲಾತಂಡಗಳು ಸಾಥ್ ನೀಡಲಿವೆ. ಸಮಸ್ಯೆ ಆಗದ ಹಾಗೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ನೋಡಲ್ ಅಧಿಕಾರಿಗಳಾದ ಚಂದ್ರಕಾಂತ ಪವಾರ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಸಂಚಾರ ಯಶಸ್ವಿಗೆ ಸರ್ವರೂ ಸಹಕರಿಸಿ ಎಂದು ಕೋರಿದರು.ಸಾರ್ವಜನಿಕರು ಹಾಗೂ ಸಂಸ್ಥೆಗಳ ಪರವಾಗಿ ಮುಖಂಡರುಗಳಾದ ರಾವುತ ತಳಕೇರಿ, ಸಿದ್ದು ಮೇಲಿನಮನಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ತಾಲೂಕು ಪಂಚಾಯತಿ ಇಒ ಭಾರತಿ ಚೆಲುವಯ್ಯ, ಕಂದಾಯ ಇಲಾಖೆ ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಕಾಸಿನಾಥ ಜಮಾದಾರ, ಸುಮಂಗಲಾ ಸೇಬೆನ್ನವರ್, ಪ್ರಕಾಶ ಮಲ್ಹಾರಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲಿಕಾರ, ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಸಿಆರ್‌ಪಿ ವಿಜಯಲಕ್ಷ್ಮಿ ನವಲಿ, ಮುಖಂಡರುಗಳಾದ ವಿಠ್ಠಲ ಯಂಕಂಚಿ, ಪ್ರಕಾಶ ಡೋಣೂರಮಠ, ಗುರುನಾಥ ಮುರುಡಿ, ವೀರೇಶ ಕುದುರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.