ಸಾರಾಂಶ
ಮುಖ್ಯವಾಗಿ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಜನರ ಬಹುಕಾಲದ ಬೇಡಿಕೆಯಾಗಿದೆ. ಬ್ರಹ್ಮಾವರದಲ್ಲಿ ಜಮೀನು ಮೀಸಲಿದ್ದರೂ ನೆನೆಗುದಿಗೆ ಬಿದ್ದಿರುವ ಕೃಷಿ ಕಾಲೇಜು ಸ್ಥಾಪನೆಯಾಗಬೇಕು. ಜಿಲ್ಲೆಯ ಬೀಚ್ ಮತ್ತು ದಾರ್ಮಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಈ ಬಗ್ಗೆ ಸಮಗ್ರ ಯೋಜನೆ ಬೇಕಾಗಿದೆ.
ಕನ್ನಡಪ್ರಭ ವಾರ್ತೆ, ಉಡುಪಿ
ಕಳೆದ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿ ಜಿಲ್ಲೆಗೆ ಯಾವುದೇ ಪ್ರತ್ಯೇಕ ಅಥವಾ ನೇರ ಯೋಜನೆಗಳನ್ನು ನೀಡದೇ ನಿರಾಸೆಯನ್ನುಂಟು ಮಾಡಿದ್ದರು.ಉಡುಪಿ ಜಿಲ್ಲೆಯ ಜನರು ಎಲ್ಲಾ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನೇ ಆರಿಸಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಂಡಿದೆ ಎಂದು ಬಿಜೆಪಿ ನಾಯಕರು ಆಗ ಆರೋಪಿಸಿದ್ದರು.
ಕರಾವಳಿಯ ಮೂರು ಜಿಲ್ಲೆಯ ಮೀನುಗಾರರಿಗೆ ಅನ್ವಯವಾಗುವಂತೆ ಕೆಲವು ಕೊಡುಗೆಗಳನ್ನು ನೀಡಲಾಗಿತ್ತು. ಮುಖ್ಯವಾಗಿ ಮೀನುಗಾರಿಕಾ ಬೋಟುಗಳಿಗೆ ನೀಡುವ ಸಬ್ಸಿಡಿ ಡಿಸೇಲ್ ಪ್ರಮಾಣವನ್ನು 1.50 ಲಕ್ಷ ಕಿಲೋ ಲೀ. ನಿಂದ 2.50 ಲಕ್ಷ ಕಿಲೋ ಲೀ. ಗೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಜಾರಿಯಾಗಿಲ್ಲ.ಮೀನುಗಾರರ ದೋಣಿಗಳ ಸೀಮೆಎಣ್ಣೆ ಇಂಜೀನ್ ನ್ನು ಪೆಟ್ರೋಲ್ ಅಥವಾ ಡಿಸೇಲ್ ಇಂಜೀನ್ ಗೆ ಬದಲಾಯಿಸಲು 50 ಸಾವಿರ ರು. ಸಹಾಯಧನ ಮತ್ತು ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲ 50 ಸಾವಿರ ರು.ವನ್ನು 3 ಲಕ್ಷ ರು.ಗೆ ಏರಿಕೆ ಘೋಷಿಸಲಾಗಿತ್ತು, ಅದೂ ಕೂಡ ಜಾರಿಯಾಗಿಲ್ಲ
ಕರಾವಳಿ ಎಲ್ಲಾ ಬಂದರುಗಳಲ್ಲಿ ಪ್ರತಿವರ್ಷ ಹೂಳೆತ್ತುವ ಭರವಸೆ, ಮೀನು ಶೈತ್ಯಾಗಾರಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಭರವಸೆ ಕೂಡ ಈಡೇರಿಲ್ಲ. ಕರಾವಳಿಯ ನೈಸರ್ಗಿಕ ಬಂದರುಗಳನ್ನು ಸುಸ್ಥಿತಿಯಲ್ಲಿಡಲು ಸಮಗ್ರ ಕರಾವಳಿ ನಿರ್ವಹಣಾ ಸಮಿತಿಯ ರಚನೆ ಆಗಿಲ್ಲ, ಕರಾವಳಿಯ ಮೂರೂ ಜಿಲ್ಲೆಗಳ ಬೀಚುಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ಕೂಡ ರಚನೆಯಾಗಿಲ್ಲ.ಮತ್ತದೇ ಹಳೆಯ ನಿರೀಕ್ಷೆಗಳು: ಉಡುಪಿ ಜಿಲ್ಲೆಯ ಜನರು ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡ ಮುಂದೆಯೂ ಕೆಲವು ಬೇಡಿಕೆಗಳನ್ನು ಮಂಡಿಸುತ್ತಲೇ ಇದ್ದಾರೆ. ಆದರೆ ಸರ್ಕಾರಗಳು ಅವುಗಳ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ.
ಮುಖ್ಯವಾಗಿ ಜಿಲ್ಲೆಯಲ್ಲೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಜನರ ಬಹುಕಾಲದ ಬೇಡಿಕೆಯಾಗಿದೆ. ಬ್ರಹ್ಮಾವರದಲ್ಲಿ ಜಮೀನು ಮೀಸಲಿದ್ದರೂ ನೆನೆಗುದಿಗೆ ಬಿದ್ದಿರುವ ಕೃಷಿ ಕಾಲೇಜು ಸ್ಥಾಪನೆಯಾಗಬೇಕು. ಜಿಲ್ಲೆಯ ಬೀಚ್ ಮತ್ತು ದಾರ್ಮಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಈ ಬಗ್ಗೆ ಸಮಗ್ರ ಯೋಜನೆ ಬೇಕಾಗಿದೆ.ಲೋಕಸಭಾ ಚುನಾವಣೆ ಮುಂದಿರುವುದರಿಂದ ಮೀನುಗಾರ ಸಮುದಾಯಕ್ಕೆ ಮತ್ತೆ ಬಜೆಟ್ ನಲ್ಲಿ ಡಿಸೆಲ್ ಸಬ್ಸಿಡಿ, ಬಡ್ಡಿರಹಿತ ಸಾಲ ಹೆಚ್ಚಳ, ಜೊತೆಗೆ ಹೊಸ ಘೋಷಣೆಗಳಾಗುವ ನಿರೀಕ್ಷೆಯೂ ಇದೆ.