ವಿದ್ಯಾರ್ಥಿಗಳು ಏಕಾಗ್ರತೆಗೆ ದುಶ್ಚಟಗಳಿಂದ ದೂರ ಇರಬೇಕು: ಮೌಲಾನಾ ಸಯ್ಯದ್

| Published : Feb 15 2024, 01:33 AM IST

ವಿದ್ಯಾರ್ಥಿಗಳು ಏಕಾಗ್ರತೆಗೆ ದುಶ್ಚಟಗಳಿಂದ ದೂರ ಇರಬೇಕು: ಮೌಲಾನಾ ಸಯ್ಯದ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಏಕಾಗ್ರತೆಗೆ ಭಂಗ ತರುವ ದುಶ್ಚಟಗಳಿಂದ ದೂರವಿದ್ದು, ಅಧ್ಯಯನದಲ್ಲಿ ಕ್ರೀಯಾಶೀಲರಾಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕು ಎಂದು ಬಿಲಾಲ್ ಮಸೀದಿಯ ಧರ್ಮಗುರು ಮೌಲಾನಾ ಸಯ್ಯದ್ ಅಬ್ದುಲ್ ಖಾದರ್ ನೂರಿ ತಿಳಿಸಿದರು. ಅರಸೀಕೆರೆಯ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ವಾರ್ಷಿಕೋತ್ಸವ । ಬಿಲಾಲ್ ಮಸೀದಿಯ ಧರ್ಮಗುರು । ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್‌ ಸಮಾರಂಭ

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿಗಳು ಏಕಾಗ್ರತೆಗೆ ಭಂಗ ತರುವ ದುಶ್ಚಟಗಳಿಂದ ದೂರವಿದ್ದು, ಅಧ್ಯಯನದಲ್ಲಿ ಕ್ರೀಯಾಶೀಲರಾಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕು. ಸುಸಜ್ಜಿತವಾದ ಮತ್ತು ನುರಿತ ಶಿಕ್ಷಕವೃಂದ ಹೊಂದಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದ ಸುತ್ತಮುತ್ತಲಿನ ಪೋಷಕರು ಇದರ ಸದುಪಯೋಗ ಪಡೆಯಬೇಕು ಎಂದು ಬಿಲಾಲ್ ಮಸೀದಿಯ ಧರ್ಮಗುರು ಮೌಲಾನಾ ಸಯ್ಯದ್ ಅಬ್ದುಲ್ ಖಾದರ್ ನೂರಿ ತಿಳಿಸಿದರು.

ನಗರದ ಮೈಸೂರು ರಸ್ತೆಯಲ್ಲಿರುವ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಈಗ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳ ಪರಿಣಾಮ ಅನೇಕ ತಂತ್ರಜ್ಞಾನಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿದೆ. ಮಕ್ಕಳು ಶಿಕ್ಷಣದ ಮಹತ್ವ ಅರಿತು ಉಪಾಧ್ಯಾಯರ ಮಾರ್ಗದರ್ಶನದಂತೆ ನಡೆದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.

ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಎ.ಬಿ. ಗುರುಸಿದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತೆರದುಕೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು. ಬದಲಾದ ವಿದ್ಯಮಾನದಲ್ಲಿ ಜ್ಞಾನ, ವಿಜ್ಞಾನ ತಂತ್ರಜ್ಞಾನದ ಫಲವಾಗಿ ಕುಳಿತಲ್ಲಿಯೇ ಜಾಗತಿಕ ಸಂಗತಿಗಳನ್ನು ತಿಳಿಯುವ ಅವಕಾಶ ಎಲ್ಲರಿಗೆ ಲಭಿಸಿದೆ. ಇಂತಹ ಅದ್ಭುತ ಮಾಹಿತಿ ಕಣಜದ ಲಾಭ ಪಡೆದು ಶೈಕ್ಷಣಿಕ ಭವಿಷ್ಯ ಉತ್ತಮಪಡಿಸಿಕೊಳ್ಳಲು ಚಿಂತನೆ ನಡೆಸಬೇಕು. ಗುರು, ಹಿರಿಯರನ್ನು ಗೌರವಿಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೆಕು ಎಂದು ಕಿವಿಮಾತು ಹೇಳಿದರು

ಜಿಲ್ಲಾ ವಕ್ಫ್‌ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್ ಮಾತನಾಡಿ, ತಮಗೆ ಕಷ್ಟಗಳಿದ್ದರೂ, ಸಮಸ್ಯೆಗಳಿದ್ದರೂ ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಬೇಕು. ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಬೇಕು ಎಂದು ಪ್ರತಿಯೊಬ್ಬ ಪೋಷಕರು ಕಷ್ಟಪಡುತ್ತಿದ್ದು ವಿದ್ಯಾರ್ಥಿಗಳು ಶ್ರಮವಹಿಸಿ ಉತ್ತಮ ಜ್ಞಾನಾರ್ಜನೆ ಪಡೆಯುವ ಮೂಲಕ ತಮ್ಮ ಹೆತ್ತವರ ಆಸೆಯನ್ನು ಪೂರೈಸಬೇಕೆಂದು ತಿಳಿಸಿದರು.

ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರದಾಗಿದ್ದು ಎಲ್ಲಾ ವರ್ಗದ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಲ್ಲಿ ಶಿಸ್ತು, ಸಂಯಮ, ಉತ್ತಮ ಗುಣ ಹಾಗೂ ಮೌಲ್ಯಗಳನ್ನು ಬೆಳೆಸುವ ಮೂಲಕ ಈ ದೇಶದ ಉತ್ತಮ ಪ್ರಜೆಗಳಾಗಿ ಮಾಡಬೇಕೆಂದರು.

ಇಂದು ಶಾಲೆಗಳನ್ನು ತೆರೆದು ನಡೆಸುವುದು ಸುಲಭದ ಮಾತಲ್ಲ. ಬಡವರೇ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಸೇವಾ ಮನೋಭಾವನೆಯಿಂದ ತಾಲೂಕಿನಲ್ಲೆ ಅತ್ಯಂತ ಕಡಿಮೆ ವಾರ್ಷಿಕ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವ ಎ.ಬಿ. ಗುರುಸಿದ್ದೇಶ್ ಹಾಗೂ ಅವರ ಸಹೋದರಿ ಸುರೇಖಾ ಸಾಧನೆ ಮೆಚ್ಚುವಂತಹದ್ದು ನಗರದ ಹೊರವಲಯದಲ್ಲಿರುವ ಈ ಶಾಲೆಯಲ್ಲಿ ೭೦೦ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಸಮಾರಂಭದಲ್ಲಿ ನಗರಸಭೆ ಸದಸ್ಯ ಈಶ್ವರಪ್ಪ, ಮುಖಂಡರಾದ ಹರ್ಷವರ್ಧನ್, ಕರಿಸಿದ್ದಪ್ಪ, ಹಾರನಹಳ್ಳಿ ಓಂಕಾರಮೂರ್ತಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು. ವಿವಿಧ ತರಗತಿಗಳ ಚಿಣ್ಣರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಎಲ್ಲರ ಗಮನಸೆಳೆಯಿತು. ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಆಡಳಿತಾಧಿಕಾರಿ ಎ.ಬಿ. ಗುರುಸಿದ್ದೇಶ್ ಉದ್ಘಾಟಿಸಿದರು. ಮೌಲಾನಾ ಸಯ್ಯದ್ ಅಬ್ದುಲ್ ಖಾದರ್ ನೂರಿ, ಸಯ್ಯದ್ ಸಿಕಂದರ್, ಕರಿಸಿದ್ದಪ್ಪ, ಓಂಕಾರಮೂರ್ತಿ ಇದ್ದಾರೆ.