ಜನಪ್ರತಿನಿಧಿಗಳ ಮೌನದಿಂದ ಹೆಚ್ಚಿದ ಸಮಸ್ಯೆ

| Published : Feb 15 2024, 01:33 AM IST

ಸಾರಾಂಶ

ಉತ್ತರಕನ್ನಡ ಜಿಲ್ಲೆಯಲ್ಲಿ ಸುದೀರ್ಘ ರಾಜಕೀಯ ಪ್ರತಿನಿಧಿತ್ವ ವಹಿಸಿದವರ ಮೌನ ಸಾಕಷ್ಟು ಜ್ವಲಂತ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ.

ಶಿರಸಿ:

ಉತ್ತರಕನ್ನಡ ಜಿಲ್ಲೆಯಲ್ಲಿ ಸುದೀರ್ಘ ರಾಜಕೀಯ ಪ್ರತಿನಿಧಿತ್ವ ವಹಿಸಿದವರ ಮೌನ ಸಾಕಷ್ಟು ಜ್ವಲಂತ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯು ಶೇ. ೮೦ರಷ್ಟು ಅರಣ್ಯ ಪ್ರದೇಶ ಹೊಂದಿದೆ. ತಲತಲಾಂತರದಿಂದ ಬದುಕು ಕಟ್ಟಿಕೊಂಡು ಬಂದಿರುವ ಅರಣ್ಯವಾಸಿಗಳ ಬದುಕಿನ ಭದ್ರತೆಗಾಗಿ ಅರಣ್ಯ ಹಕ್ಕು ಕಾಯ್ದೆ ೨೦೦೬ ಮತ್ತು ೨೦೧೨ರ ತಿದ್ದುಪಡಿ, ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ ಅನ್ವಯ ಅಧಿನಿಯಗಳು ರೂಪಿತಗೊಂಡು ಹಕ್ಕು ಪತ್ರ ನೀಡಿಕೆಗೆ ಅವಕಾಶಗಳಿದ್ದಾಗಲೂ ಇಂದಿಗೂ ಮಂಜೂರಾತಿಯಿಲ್ಲದೇ ಒಟ್ಟಾರೆಯಾಗಿ ೮೫ ಸಾವಿರ ಕುಟುಂಬಗಳು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಿದೆ. ವಜಾಗೊಂಡಿರುವ ಅರ್ಜಿಗಳನ್ನು ಮರುಪರಿಶೀಲಿಸಿ ೧೯೭೮ಕ್ಕೂ ಪೂರ್ವ ಅರಣ್ಯವಾಸಿಗಳ ಗುರುತಿಸುವ ಮಾನದಂಡಗಳ ಸಡಿಲಿಕೆ ಮಾಡಿ ಜಿಲ್ಲೆಯ ಭೌಗೋಳಿಕ ಸ್ಥಿತಿಗತಿಯ ಮನವರಿಕೆ ಮಾಡುವ ಮೂಲಕ ಬಿಕಟ್ಟು ಪರಿಗಾರಕ್ಕೆ ಸರ್ಕಾರ ಶೀಘ್ರ ಮುಂದಾಗಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ಜನತೆಗೆ ಉನ್ನತ ಮಟ್ಟದ ಆರೋಗ್ಯ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು. ವೈಜ್ಞಾನಿಕ ಸಮೀಕ್ಷೆಯ ತಳಹದಿಯಲ್ಲಿ ರೂಪಿತಗೊಂಡ ಎಚ್. ಕಾಂತರಾಜ ವರದಿಯನ್ನು ತಕ್ಷಣ ಸ್ವೀಕರಿಸಿ, ಜಾರಿಗೆ ತರಬೇಕು. ಜಿಲ್ಲೆಯಲ್ಲಿ ಸಂಪನ್ಮೂಲ ಆಧರಿತ ಉದ್ಯೋಗ ಪಾರ್ಕ್ ನಿರ್ಮಾಣ ಮತ್ತು ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯ ಜನರ ಜ್ವಲಂತ ಸಮಸ್ಯೆಯಾದ ಇ-ಸ್ವತ್ತು ಮತ್ತು ಈ ಖಾತಾ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು. ಫಾರಂ-೭ ಮತ್ತು ಫಾರ್ಂ ನಂಬರ್‌ ೭ಎ ರಲ್ಲಿ ಭೂ ಮಾಲೀಕನ ಹೆಸರಿನ ಬದಲು ಕರ್ನಾಟಕ ಸರ್ಕಾರ ಎಂದು ನಮೂದಾಗಿದೆ. ಅದನ್ನು ಬದಲಾವಣೆ ಮಾಡಬೇಕು. ಅವೈಜ್ಞಾನಿಕ ರಾಷ್ಡ್ರೀಯ ಹೆದ್ದಾರಿ ನಿರ್ಮಾಣವಾದ ಪರಿಣಾಮ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದ ನಗರ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣವಾಗದೇ ಟೋಲ್ ಶುಲ್ಕ ವಸೂಲಾತಿ ನಡೆಯುತ್ತಿದೆ. ಟೋಲ್ ನಾಕಾ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ತೀ.ನ. ಶ್ರೀನಿವಾಸ, ವಿ.ಎನ್. ನಾಯ್ಕ, ಎಂ.ಡಿ. ನಾಯ್ಕ ಭಟ್ಕಳ, ಬೇನಿತ್ ಸಿದ್ದಿ ಯಲ್ಲಾಪುರ, ಟೊಪಣ್ಣ ಲಮಾಣಿ ಮುಂಡಗೋಡ, ಕನ್ನೇಶ ನಾಯ್ಕ ಸಿದ್ದಾಪುರ, ವಿರಭದ್ರ ನಾಯ್ಕ ಮನ್ಮನೆ, ನಾಗಪ್ಪ ಶಿರಸಿ, ಶಫಿ ಶೇಖ್ ಬನವಾಸಿ, ವಸಂತ ಲಮಾಣಿ ಬಾಚಣಕಿ ಇದ್ದರು.ಅಧಿಕಾರಿ ವರ್ಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಚ್ಚಾಶಕ್ತಿ ತೋರಿಸಬೇಕೆಂದು ಫೆ. ೨೦ರಂದು ಕಾರವಾರದಲ್ಲಿ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ಡಾ. ನಾಗೇಶ ನಾಯ್ಕ ಕಾಗಾಲ ಇದ್ದರು.